ಹಿಲ್ಲೂರು ಯಕ್ಷಮಿತ್ರ ಪ್ರಶಸ್ತಿ ಪ್ರದಾನ, ಗಾನ ವೈಭವ–ಯಕ್ಷಗಾನ ಕಂಗೊಳಿಸಿದ ಸಂಭ್ರಮ

ಶಿರಸಿ:
ಹಿಲ್ಲೂರು ಯಕ್ಷಮಿತ್ರ ಬಳಗ ಹಮ್ಮಿಕೊಂಡ ಕಾರ್ಯಕ್ರಮವು ಗಾನ ವೈಭವ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನಗಳೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು. ಈ ಸಮಾರಂಭವು ಯಕ್ಷಗಾನ ಕಲೆ ಉಳಿವು, ಜಾಗೃತಿ, ಕಲಾವಿದರ ಅಭಿನಂದನೆ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕುರಿತ ಚಿಂತನೆಗಳಿಗೆ ವೇದಿಕೆಯಾಯಿತು.

ನಗರದ ಟಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಾಲಿನ ಹಿಲ್ಲೂರು ಯಕ್ಷಮಿತ್ರ ಪ್ರಶಸ್ತಿಯನ್ನು ಯಕ್ಷಗಾನದ ಮೇರು ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ ಅವರಿಗೆ ಪ್ರದಾನಿಸಲಾಯಿತು. ಸ್ಮರಣಿಕೆ, 10,000 ನಗದು, ಶಾಲು ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಹಿರಿಯ ಕಲಾವಿದ ಕೃಷ್ಣ ಯಾಜಿ ಬಳಕೂರು ಹಾಗೂ ಅವರ ಪತ್ನಿ ಶಾಂತಾ ಯಾಜಿ ಅವರನ್ನು ಸಹ 10,000 ನಗದು ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಇದೇ ವೇಳೆ ಅನಾಥ ಪ್ರಾಣಿಗಳ ರಕ್ಷಕ ರಾಜೇಂದ್ರ ಶಿರಸಿಕರ್ ಅವರಿಗೆ 5,000 ಪ್ರೋತ್ಸಾಹಕ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಅವರು, ಯಕ್ಷಗಾನ ಕಲೆಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯವೆಂದು ಅಭಿಪ್ರಾಯಪಟ್ಟರು. ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಹಿಲ್ಲೂರು ಭಾಗವತರು ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಕೆಡಿಸಿಸಿ ಮಾಜಿ ಆರ್.ಜಿ. ಭಾಗವತ, ಚೈತನ್ಯ ಪಿಯು ಕಾಲೇಜಿನ ಅಧ್ಯಕ್ಷ ಕೆ.ಬಿ. ಲೋಕೇಶ ಹೆಗಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಳಗದ ರಮ್ಯ ರಾಮಕೃಷ್ಣ, ಗುರುಪಾದ ಭಟ್ಟ, ಚಿತ್ರಾ ಹೆಗಡೆ, ರವಿ ಮುರೂರು ಸೇರಿದಂತೆ ಹಲವರು ಭಾಗವಹಿಸಿದ್ದರು. ವಿವೇಕ ಹೆಗಡೆ ಸ್ವಾಗತಿಸಿ, ರಾಮಕೃಷ್ಣ ಹೆಗಡೆ ಹಿಲ್ಲೂರು ಪ್ರಸ್ತಾವಿಕ ಭಾಷಣ ಮಾಡಿದರು. ನಾಗರಾಜ ಕವಲಕ್ಕಿ ಕಾರ್ಯಕ್ರಮ ನಿರ್ವಹಿಸಿದರು.

ಗಾನ ವೈಭವ ಮನತಣಿಸಿದರೆ, ಯಕ್ಷಗಾನ ಮನಸೆಳೆಯಿತು

ಕಾರ್ಯಕ್ರಮದ ಅಂಗವಾಗಿ ನಡೆದ ಗಾನ ವೈಭವದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಗಜಾನನ ಭಟ್ಟ ತುಳಗೇರಿ, ಸೃಜನ ಹೆಗಡೆ ಸಾಗರ ದ್ವಂದ್ವ ಹಾಗೂ ಏಕಗಾನದಲ್ಲಿ ಯಕ್ಷಗಾನದ ವಿವಿಧ ರಸಪೂರ್ಣ ಪದ್ಯಗಳನ್ನು ಹಾಡಿ ಮೆಚ್ಚುಗೆ ಪಡೆದರು. ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ಗುಡ್ಡೆದಿಂಬ ಹಾಗೂ ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ, ಗಜಾನನ ಸಾಂತೂರು ತಮ್ಮ ಕೈಚಳಕ ತೋರಿದರು. ನಾಗರಾಜ ಜೋಶಿ ಪದ್ಯಗಳ ವಿವರಣೆ ನೀಡಿದರು.

ಕೃಷ್ಣಾರ್ಜುನ ಕಾಳಗ ಯಕ್ಷಗಾನ ರಂಗೇರಿತು

ಪೌರಾಣಿಕ ಪ್ರಸಂಗ “ಕೃಷ್ಣಾರ್ಜುನ ಕಾಳಗ” ಯಕ್ಷಗಾನ ಕಲಾಸಕ್ತರ ಮನತಣಿಸಿತು. 70 ವರ್ಷ ವಯಸ್ಸಿನಲ್ಲೂ ಕೃಷ್ಣಯಾಜಿ ಬಳಕೂರು ಅರ್ಜುನ ಪಾತ್ರದಲ್ಲಿ ಗಂಭೀರವಾಗಿ ಅಭಿನಯಿಸಿದರೆ, ವಿನಯ ಬೇರೊಳ್ಳಿ ಕೃಷ್ಣನಾಗಿ ಮಿಂಚಿದರು. ಅಶ್ವಿನಿ ಕೊಂಡದಕುಳಿ (ಸುಭದ್ರೆ), ಶ್ರೀಧರ ಹೆಗಡೆ ಚಪ್ಪರಮನೆ (ದಾರುಕ), ಹಿಲ್ಲೂರು ಮಂಜುನಾಥ (ಭೀಮ) ತಮ್ಮ ಅಭಿನಯದ ಮೂಲಕ ಮೆಚ್ಚುಗೆ ಪಡೆದರು.

ಅಭಿಮನ್ಯುವಾಗಿ ಮಿಂಚಿದ ಬಾಲ ಪ್ರತಿಭೆ

ಹುತ್ಗಾರ ಗ್ರಾಮದ ಬಾಲ ಕಲಾವಿದೆ ಸನ್ನಿಧಿ ಭಟ್ಟ ಅಭಿಮನ್ಯುವಾಗಿ ಅದ್ಭುತವಾಗಿ ಅಭಿನಯಿಸಿ ಪ್ರೇಕ್ಷಕರ ಕರತಾಡನ ಪಡೆದಳು. “ಅಪ್ಪನ ನಲ್ಲಿ ಲಾಲಿಸಿ ಕೇಳೆನ್ನ ಮಾತ” ಎಂಬ ಪದ್ಯದ ಮೂಲಕ ಲಾಲಿತ್ಯಪೂರ್ಣ ಅಭಿನಯ ಪ್ರದರ್ಶಿಸಿದ ಈಕೆ ಯಕ್ಷಗಾನ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದಳು.

ಒಟ್ಟಾರೆ, ಹಿಲ್ಲೂರು ಯಕ್ಷಮಿತ್ರ ಬಳಗದ ಈ ಕಾರ್ಯಕ್ರಮ ಯಕ್ಷಗಾನ ಕಲೆಗಿನ ವೈಭವವನ್ನು ಪ್ರತಿಬಿಂಬಿಸಿ, ಕಲಾವಿದರ ಸಾಧನೆಗೆ ಸಾರ್ಥಕ ವೇದಿಕೆಯಾಗಿತು.