ಹೊನ್ನಾವರ:
ತಾಲ್ಲೂಕಿನ ರಥಬೀದಿ ಚಾರೋಡಿ ಮೇಸ್ತ ಸಮಾಜದ ಶ್ರೀ ಶಾರದಾಂಬಾದೇವಿ ಹಾಗೂ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ವರ್ಧಂತಿ ಮಹೋತ್ಸವ ಇದೆ ಏಪ್ರಿಲ್ 7ನೇ , ಮಂಗಳವಾರದಂದು ಶೃದ್ಧಾಭಕ್ತಿ ವಿಜೃಂಭಣೆಯಿಂದ ನಡೆಯಲಿದೆ.

ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರದ ಚೈತ್ರ ಕೃಷ್ಣ ಪಂಚಮಿ ಮಂಗಳವಾರ ದಿನಾಂಕ 07-04-2026 ರಂದು ಹೊನ್ನಾವರದ ರಥಬೀದಿಯಲ್ಲಿ
ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ವಿದುಶೇಖರ ಭಾರತೀತೀರ್ಥ ಮಹಾ ಸ್ವಾಮಿಗಳಿಂದ ಕಳೆದ ವರ್ಷ ಲೋಕಾರ್ಪಣೆಗೊಂಡ ನೂತನ ಶಿಲಾಮಯ ದೇವಸ್ಥಾನದಲ್ಲಿ ವಿರಾಜಮಾನರಾಗಿರುವ ಶ್ರೀ ಶಾರದಾಂಬಾ ದೇವಿ ಹಾಗೂ ಶ್ರೀ ಚಂದ್ರಮೌಳೀಶ್ವರ ದೇವರ 143ನೇ ವರ್ಧಂತಿ ಉತ್ಸವ ಹಾಗೂ ಶ್ರೀ ಚೌಡೇಶ್ವರಿ ಹಾಗೂ ಶ್ರೀ ನಾಗದೇವರ ವರ್ಧಂತಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ವರ್ಧಂತಿ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ 9:30 ರಿಂದ ಶ್ರೀ ಶಾರದಾಂಬಾ ಹಾಗೂ ಶ್ರೀ ಚಂದ್ರಮೌಳೀಶ್ವರ ಸಾನಿಧ್ಯದಲ್ಲಿ ಸಪ್ತಕಲಾ ಹೋಮ, ಪೂರ್ಣಾಹುತಿ, ದೇವರಿಗೆ ಸಪ್ತಕಲಶ ಅಭಿಷೇಕ, ದೇವರಿಗೆ ಅಲಂಕಾರ ಮತ್ತು ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ವಿಶೇಷವಾಗಿ ನೂತನ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು ಎಲ್ಲಾ ಭಕ್ತಾದಿಗಳು ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.
ಸಂಜೆ 6.00 ಗಂಟೆಯಿಂದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಭರತ ನಾಟ್ಯ, ಯಕ್ಷಗಾನ, ದೇವತಾ ನೃತ್ಯ, ಹಾಡು, ಭಜನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ 9:30ರಿಂದ ಶ್ರೀ ವೀರಾಂಜನೇಯ ಯಕ್ಷ ಮಿತ್ರ ಮಂಡಳಿ, ಮೊಗೆಹಳ್ಳ (ಚಿಟ್ಟಾಣಿ ಬಳಗ)’ಮಹಾಮಂತ್ರಿ ದುಷ್ಟಬುದ್ಧಿ'(ದೇವಿದರ್ಶನ) ಯಕ್ಷಗಾನ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದವರು ತಿಳಿಸಿದ್ದಾರೆ.

