ಕೃಷಿ ಭೂಮಿಗೆ ಬಂಡವಾಳಶಾಹಿಗಳಿಂದ ಮಣ್ಣು; ಸಾರ್ವಜನಿಕರಿಂದ ಪಂಚಾಯತ್ ಕಛೇರಿ ಮುತ್ತಿಗೆ.

ಭಟ್ಕಳ :

ತಾಲೂಕಿನ ಮುಂಡಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಕೆಲವು ಬಂಡವಾಳಶಾಹಿ ವ್ಯಕ್ತಿಗಳು ಬೇರೆ ಕಡೆಯಿಂದ ಬಂದು ಇಲ್ಲಿ ಜಾಗ ಖರೀದಿ ಮಾಡಿ ಮಣ್ಣು ತುಂಬಿಸುತ್ತಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರಿನಿಂದ ಕೃತಕ ಪ್ರವಾಹ ತಲೆದೋರುತ್ತೆ ಎಂದು ಆರೋಪಿಸಿ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಮಳೆಗಾಲದ ಸಂದರ್ಭದಲ್ಲಿ‌ ಪ್ರತಿ ಭಾರಿಯೂ ಈ ಪ್ರದೇಶಗಳಲ್ಲಿ ಪ್ರವಾಹ ತಲೆದೋರುತ್ತಿದ್ದು, 50 ಮೀಟರ್ ಅಂತರದಲ್ಲಿ ಶರಾಬಿ ಹೊಳೆ ಸಮೀಪದಲ್ಲೇ ಇರುವುದರಿಂದ ಸಾರ್ವಜನಿಕರಿಗೆ ಇದು ಕಂಠಕವಾಗಿ ಪರಣಮಿಸುತ್ತದೆ. ಹೀಗಿರುವಾಗ ಖಾಸಗಿಯವರು ಕೃಷಿಭೂಮಿಯಲ್ಲಿ ಈಗಾಗಲೇ ತುಂಬಿದ ಮಣ್ಣನ್ನು ತೆರವು ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.

ಸುತ್ತಮುತ್ತಲ ವ್ಯಾಪ್ತಿಯು ಪ್ರವಾಹ ಪೀಡಿತ ಪ್ರದೇಶವಾಗಿರುವುದರಿಂದ ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಲು ಅನುಮತಿ ಪತ್ರವನ್ನು ನೀಡಬಾರದು ಎಂದು ಈ ಹಿಂದೆಯೇ ಸಾರ್ವಜನಿಕರ ಸಮ್ಮುಖದಲ್ಲಿ ಠರಾವು ಮಾಡಲಾಗಿತ್ತು. ಆದರೂ ಪಂಚಾಯತ ಅಧಿಕಾರಿಗಳು ಲಂಚ ಪಡೆದು ಕೃಷಿ ಭೂಮಿಯಲ್ಲಿ ಮಣ್ಣು ತುಂಬಲು ಅವಕಾಶ ನೀಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪವಿಭಾಗಾಧಿಕಾರಿಗಳು ಅಂದು ಸ್ಥಳ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸಬಾರದು ಇದು ಮುಳುಗಡೆ ಪ್ರದೇಶ ಎಂದು ಹೇಳಿದ್ದರು ಎಂದು ಗ್ರಾಮ ಪಂಚಾಯತ ಮಾಜಿ ಸದಸ್ಯ ರಾಜು ನಾಯ್ಕ ಹೇಳಿದರು.

ತಹಶೀಲ್ದಾರ್ ಫೋನ್ ನಂಬರ್ ಇಲ್ಲದೇ ತಡಬಡಾಯಿಸಿದ ಪಿಡಿಓ:

ಪಿಡಿಓ ಪಂಚಾಂಯತಿಗೆ ಆಗಮಿಸಿದ ಕೂಡಲೇ ತಹಶಿಲ್ದಾರರನ್ನು ಸ್ಥಳಕ್ಕೆ ಕರೆಯುವಂತೆ ಆಗ್ರಹಿಸಿ, ತಹಶಿಲ್ದಾರರು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಿ ಸೂಕ್ತ ಪರಿಹಾರಕೊಡಿಸುವಂತೆ ಮನವಿಸಿಕೊಂಡರು. ಸ್ಥಳಕ್ಕೆ ಬರದೇ ಹೋದಲ್ಲಿ ಪಂಚಾಯತ್ ಕಛೇರಿ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ತಹಶೀಲ್ದಾರರಿಗೆ ಸಂಪರ್ಕ ಮಾಡಲು ನಂಬರ್ ಇಲ್ಲದೇ ಪಿಡಿಓ ತಡಬಡಾಯಿಸಿದ್ದನ್ನು ನೋಡಿ ಸಾರ್ವಜನಿಕರೊಬ್ಬರು ತಹಶೀಲ್ದಾರ್ ನಂಬರ ಕೊಟ್ಟ ಪ್ರಮೇಯ ಎದುರಾಯಿತು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ ಸದಸ್ಯ ರಾಜು ನಾಯ್ಕ, ಹರೀಶ ನಾಯ್ಕ, ವಿಷ್ಣು ನಾಯ್ಕ, ಮಾದೇವ ನಾಯ್ಕ, ಮಾಸ್ತಪ್ಪ ನಾಯ್ಕ, ನಾಗರತ್ನ ನಾಯ್ಕ, ಪದ್ಮ ನಾಯ್ಕ, ಆರತಿ ನಾಯ್ಕ, ಪಾರ್ವತಿ ನಾಯ್ಕ ಹಾಗೂ ಸಾರ್ವಜನಿಕರಿದ್ದರು.