ದಾಂಡೇಲಿ :ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪರಿಸರ ರಕ್ಷಣೆ ನಮ್ಮ ಕರ್ತವ್ಯ : ಅನೂಜ್ ಕುಮಾರ್ ದಯಾಳ್

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ಕಾರ್ಖಾನೆಯ ಎಚ್.ಆರ್.ಡಿ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅನೂಜ್ ಕುಮಾರ್ ದಯಾಳ್ ಅವರು ಜಗತ್ತಿನ ಪ್ರತಿಯೊಂದು ಜೀವಿಯು ಪರಿಸರವನ್ನು ಅವಲಂಬಿಸಿಕೊಂಡಿದೆ. ಪರಿಸರವಿದ್ದರೆ ನಾವು ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇರಬೇಕು. ಪರಿಸರದ ಬಗ್ಗೆ ಕಾಳಜಿ, ಗೌರವವಿದ್ದಲ್ಲಿ ಪರಿಸರ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ವಾಣಿಜ್ಯ ವಿಭಾಗದ ಉಪಾಧ್ಯಕ್ಷರಾದ ರವಿ ಗೌತಮ್ & ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ನಿರ್ವಹಣಾ ವಿಭಾಗದ ಉಪಾಧ್ಯಕ್ಷರಾದ ಚಂದ್ರೇಶ್ ಗುಪ್ತಾ ಅವರು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನದ ಭಾಗವಾಗಬೇಕೆಂದರು.

ಕಾರ್ಖಾನೆಯ ಅಧಿಕಾರಿಗಳಾದ ಮನೋರಂಜನ್ ಪತಿಯವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ರಮೇಶ್.ಎನ್.ವಂದಿಸಿದರು. ನಾರಾಯಣ ಕರಗುದ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಗದ ಕಾರ್ಖಾನೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯ್ತು.