ದಾಂಡೇಲಿ : ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಒಳಚರಂಡಿ ಇಲಾಖೆ ಹಳಿಯಾಳ ಇವರ ವತಿಯಿಂದ ದಾಂಡೇಲಿಯ ಹಳೆದಾಂಡೇಲಿಯಿಂದ ಕುಡಿಯುವ ನೀರು ಪೊರೈಕೆಯ ಪೈಪ್ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯುವ ಕಾರ್ಯ ನಡೆಯುತ್ತಿದ್ದು, ಇದೀಗ ಮಳೆ ಬರುವ ಸಂದರ್ಭದಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಹೊಂಡ ತೆಗೆಯುವುದರಿಂದ ರಸ್ತೆ ತೀವ್ರ ಹದಗೆಟ್ಟು ಸುಗಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತುದೆ. ವಾಹನ ಅಪಘಾತಗಳು ಆಗುವ ಸಾಧ್ಯತೆಯಿರುತ್ತದೆ. ಇನ್ನೂ ಪಾದಚಾರಿಗಳು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾಗುತ್ತದೆ. ಅಗೆದು ಹೊರತೆಗೆದ ಮಣ್ಣು ಇಡೀ ರಸ್ತೆಯುದ್ದಕ್ಕೂ ಹರಡಿಕೊಂಡಿರುವುದರಿಂದ ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಗೆದಿರುವುದರಿಂದ ಮಳೆ ಬಂದು ರಸ್ತೆಯಿಡಿ ಕೆಸರಿನ ರಾಢಿಯಾಗಿದ್ದು, ಸ್ಥಳೀಯ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ತೊಂದರೆ ಎದುರಾಗಿದೆ ಎಂದು ಗುರುವಾರ ಕೆ.ಸಿ.ವೃತ್ತದ ಸಮೀಪ ಸಾರ್ವಜನಿಕರು ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಳೆ ಬರುತ್ತಿರುವ ಸಮಯದಲ್ಲಿ ಇಂಥಹ ಕಾಮಗಾರಿಗಳನ್ನು ನಡೆಸುವುದು ಸರಿಯಲ್ಲ. ಇಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ. ಮಳೆಗಾಲ ಮುಗಿದ ಬಳಿಕವೆ ಕಾಮಗಾರಿ ನಡೆಸಬೇಕೆಂದು ಸ್ಥಳೀಯರಾದ ರಾಜು ಕೊಡ್ಕಣಿ, ಗಣಪತಿ ಸದಾನಂದ ನಾಯ್ಕ, ಪ್ರಕಾಶ ಬೆಟ್ಕರ್, ಸುಧಾಕರ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.