ಸಿದ್ದಾಪುರ: ಕೃಷಿ ಕಾರ್ಯದಲ್ಲಿ ನಿರಂತರ ಪರಿಶ್ರಮದ ಸಾಧನೆ ಮಾಡುತ್ತಿರುವ ಅನುಭವಿ ಕೃಷಿಕನಿಗೆ ರಜತ ಕಿರೀಟ ಧಾರಣೆಯ ವಿಶಿಷ್ಟ ಗೌರವದ ಕಾರ್ಯಕ್ರಮ ತಾಲೂಕಿನ ನಾಣಿಕಟ್ಟಾ ಸಮೀಪದ ಕಲಗದ್ದೆ ಗ್ರಾಮದಲ್ಲಿ ಏರ್ಪಾಟಾಗಿತ್ತು.
ಹಾಸನ ಜಿಲ್ಲೆ, ಅರಸೀಕೆರೆ ಕುರುವಂತೆಯ ಶ್ಯಾನುಭೋಗ ದಾಸಪ್ಪ ದತ್ತಿಯ ಮುಖ್ಯಸ್ಥ ಕೆ. ಪಿ. ವೆಂಕಟೇಶಮೂರ್ತಿ ಈ ಕಾರ್ಯಕ್ರಮ ಏರ್ಪಡಿಸಿದ್ದರು.
ಕಲಗದ್ದೆಯ ಪರಿಶ್ರಮಿ ಕೃಷಿಕ ವಿಶ್ವೇಶ್ವರ ರಾಮಕೃಷ್ಣ ಭಟ್ಟ ಅವರಿಗೆ ಈ ಸಂದರ್ಭದಲ್ಲಿ ಕೃಷಿ ರತ್ನಾಕರ ಬಿರುದಿನೊಂದಿಗೆ ರಜತ ಕಿರೀಟ ಧಾರಣೆ ಮಾಡಿ ಗೌರವಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಂಸ್ಥಾಪಕದಲ್ಲಿ ಒಬ್ಬರಾದ ತಮ್ಮ ತಂದೆ ದಿವಂಗತ ದಾಸಪ್ಪ ಅವರ ಆಶಯದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಪರಿಶ್ರಮದ ಮೂಲಕ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ, ಅಂಥವರಿಗೆ ರಜತ ಕಿರೀಟ ಧಾರಣೆ ಮಾಡಿ ಪ್ರಶಂಸೆಯ ಬಿರುದಾವಳಿ ಸಹಿತ ಸನ್ಮಾನಿಸಿ ಗೌರವಿಸುತ್ತಿರುವ ಬಗ್ಗೆ ಈ ಸಂದರ್ಭದಲ್ಲಿ ಕೆ.ಪಿ. ವೆಂಕಟೇಶಮೂರ್ತಿ ವಿವರಿಸಿದರು.
ತಂದೆಯವರ ಗುರಿಯಂತೆ ಈವರೆಗೆ 105 ಮಂದಿ ಸಾಧಕರಿಗೆ ರಜತ ಕಿರೀಟ ಧಾರಣೆ ಗೌರವ ಸಲ್ಲಿಕೆ ಪೂರೈಸಿದ್ದಾಗಿ ಅವರು ತಿಳಿಸಿದರು.
ಹಿರಿಮೆಯ ಕಾರ್ಯ…
ವಸುಂಧರಾ ಸೇವಾ ಸಂಸ್ಥೆ ಮುಖ್ಯಸ್ಥ ಆರ್ ಟಿ ಭಟ್ಟ ಕಬ್ಗಾಲ್ ಅಭಿನಂದನಾ ನುಡಿಗಳ ನ್ನಾಡಿದರು. ಪಿತೃಗಳ, ದೇವತೆಗಳ ಆಶೀರ್ವಾದದಿಂದ ಕೆ. ಪಿ. ವೆಂಕಟೇಶಮೂರ್ತಿ ಅವರು ಉನ್ನತ ಮಟ್ಟಕ್ಕೇರಿ ಇಂತಹ ಗೌರವಾರ್ಪಣೆ ಯ ಹಿರಿಮೆಯ ಕಾರ್ಯ ಮಾಡುವುದಕ್ಕೆ ಕಾರಣವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಇಲ್ಲಿ ಪರಿಶ್ರಮಿ ಕೃಷಿಕ ವಿಶ್ವೇಶ್ವರ ಭಟ್ಟ ಅವರಿಗೆ ರಜತ ಕಿರೀಟ ಧಾರಣೆಯ ಮೂಲಕ ಬೆವರಿನ ದುಡಿಮೆಯ ಕೃಷಿಕ ಸಮುದಾಯಕ್ಕೆ ಗೌರವ ಅರ್ಪಿಸಿದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೂಡ್ಲಮನೆ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇಮೂ ಸುಬ್ರಾಯ ಭಟ್ಟ ಬಾಳೂರು ವೇದ ಘೋಷ ಪ್ರಸ್ತುತಪಡಿಸಿದರು. ಎಂ.ಎಂ.ಹೆಗಡೆ ಕಂಚಿಕೈ ನಿರೂಪಿಸಿದರು. ಭರತ ಭಟ್ಟ ವಂದಿಸಿದರು.