ದಾಂಡೇಲಿ :ಸಮಯಕ್ಕೆ ಸರಿಯಾಗಿ ಬಾರದಿದ್ದ ಅಂಬಿಕಾನಗರಕ್ಕೆ ಹೋಗುವ ಬಸ್: ಪ್ರಯಾಣಿಕರಿಂದ ಆಕ್ರೋಶ

ದಾಂಡೇಲಿ : ಅಂಬಿಕಾನಗರ-ಶಕ್ತಿನಗರ ಬಸ್ ಸಮಯಕ್ಕೆ ಸರಿಯಾಗಿ ಬಾರದಿದ್ದ ಹಿನ್ನಲೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಅಂಬಿಕಾನಗರ ಕಡೆಯ ಪ್ರಯಾಣಿಕರು ಸಾರಿಗೆ ಘಟಕ ನಿಷ್ಕಾಳಜಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ಪ್ರತಿದಿನ ಸಂಜೆ 4.15 ಕ್ಕೆ ದಾಂಡೇಲಿ ಬಸ್ ನಿಲ್ದಾಣದಿಂದ ಹೊರಡಬೇಕಾದ ಸಾರಿಗೆ ಬಸ್ ಬಹುತೇಕ ದಿನಗಳಲ್ಲಿ ನಿಗದಿತ ಸಮಯಕ್ಕೆ ಬಾರದಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಅದೇ ರೀತಿ ಗುರುವಾರವು ಸಹ ಇಂದು ಸಂಜೆ 3.45 ನಿಮಿಷಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದ ಅಂಬಿಕಾನಗರ ಕಡೆಗೆ ಹೋಗುವ ಪ್ರಯಾಣಿಕರಿಗೆ ಸಂಜೆ 5 ಗಂಟೆಯಾದರೂ ಬಸ್ ಬಂದಿರಲಿಲ್ಲ. ಪ್ರತಿನಿತ್ಯ ಇದೇ ಬಸ್ಸಿನಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಮಹಿಳೆಯರ, ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ನಿಗದಿತ ಸಮಯಕ್ಕೆ ಬಸ್ ಬಿಡಬೇಕೆಂದು ಆಗ್ರಹಿಸಿ ಪ್ರಯಾಣಿಕರು ಸಾರಿಗೆ ಘಟಕದ ನಿರ್ಲಕ್ಷ್ಯವನ್ನು ತೀವ್ರವಾಗಿ ವಿರೋಧಿಸಿದರು. ಸಂಜೆ 4.15 ಕ್ಕೆ ದಾಂಡೇಲಿ ಬಸ್ ನಿಲ್ದಾಣದಿಂದ ಬಿಡಬೇಕಾದ ಬಸ್ ಒಂದು ಗಂಟೆ ತಡವಾಗಿ ಹೊರಟಿದೆ. ಈ ಬಗ್ಗೆ ಟಿಕೆಟ್ ಕಂಟ್ರೋಲರ್ ಅವರಲ್ಲಿ ವಿಚಾರಿಸಿದಾಗ ಚಾಲಕನ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ತಡವಾಯಿತೆಂದು ಹೇಳಿಕೆಯನ್ನು ನೀಡಿದ್ದಾರೆ. ಚಾಲಕನಿಗೆ ಆರೋಗ್ಯ ಬಾಧೆವುಂಟಾದಲ್ಲಿ ಬಸ್ ಸಂಚಾರವನ್ನೆ ಸ್ಥಗಿತಗೊಳಿಸಲಾಗುತ್ತದೆಯೆ ಎಂದು ಕೇಳಿದಾಗ ಸಿಬ್ಬಂದಿಗಳ ಕೊರತೆಯಿದೆ ಎಂದು ಹೇಳಿದ್ದಾರೆ.

ದಾಂಡೇಲಿ ಸಾರಿಗೆ ಘಟಕದಲ್ಲಿ ಬಸ್ ಸಂಚಾರದ ಕುರಿತಂತೆ ಅನೇಕ ದೂರುಗಳು ಕೇಳಿ ಬರತೊಡಗಿದ್ದು, ಸಿಬ್ಬಂದಿಗಳ ಕೊರೆತೆಯಿಂದಲೂ ಸಮರ್ಪಕ ಸೇವೆ ನೀಡಲು ಕಷ್ಟಸಾಧ್ಯವಾಗತೊಡಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಘಟಕದ ಮೇಲಾಧಿಕಾರಿಗಳು ಇಂಥಹ ಸಮಸ್ಯೆಗಳು ಮೇಲಿಂದ ಮೇಲೆ ನಡೆಯದಂತೆ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.