ಹಳಿಯಾಳ : ಮರ- ಗಿಡಗಳ ರಕ್ಷಣೆ ನಮ್ಮ ಪ್ರಮುಖ ಜವಾಬ್ದಾರಿ- ಉಮೇಶ ಬೋಳಶೆಟ್ಟಿ

ಹಳಿಯಾಳ : ಗಿಡಗಳನ್ನು ನೆಡುವುದು ಆಚರಣೆಗಾಗಿ ಅಲ್ಲ, ಬದಲಾಗಿ ನಮ್ಮ ಬದುಕಿಗಾಗಿ ಎನ್ನುವ ಅರಿವು ಪ್ರತಿಯೊಬ್ಬರಲ್ಲಿ ಜಾಗೃತವಾದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನಮ್ಮ ದೇಶ ಮರ-ಗಿಡಗಳನ್ನು ಪೂಜಿಸುವ, ಆರಾಧಿಸುವ ಸಂಸ್ಕೃತಿಯನ್ನು ಹೊಂದಿರುವ ದೇಶ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿದೆ. ಹಾಗಾಗಿ ಇಂದಿಗೂ ನಮ್ಮ ಪಶ್ಚಿಮ ಘಟ್ಟ ಜೀವವೈವಿದ್ಯತೆ ಮತ್ತು ಸಮೃದ್ದ ಕಾಡಿನಿಂದ ಜಗತ್ತಿನ ಗಮನ ಸೆಳೆದಿದೆ ಎಂದು ಹಳಿಯಾಳ ಪುರಸಭೆಯ ಮಾಜಿ ಅಧ್ಯಕ್ಷರಾದ ಉಮೇಶ ಬೋಳಶೆಟ್ಟಿಯವರು ಹೇಳಿದರು.

ಅವರು ಇಂದು ಮಂಗಳವಾರ ಹಳಿಯಾಳ ಪಟ್ಟಣದ ಪುರಸಭೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ತಾಂತ್ರಿಕತೆ ಬೆಳೆಯುತ್ತಿದ್ದಂತೆಯೆ ಸಮೃದ್ಧ ಅರಣ್ಯ ಬರಿದಾಗುತ್ತಿದೆ. ಕಾಡು ಬರಿದಾದರೇ ನಾಡು ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿ, ನಾಡಿನ ಜನತೆಯ ಬದುಕು ದುಸ್ತರವಾಗುತ್ತದೆ. ಗಿಡ-ಮರಗಳು ಮತ್ತು ನಮ್ಮ ಪರಿಸರ ನಮ್ಮ ಬದುಕಿನ ಭಾಗ ಎನ್ನುವುದನ್ನು ಅರಿತು ನಡೆದುಕೊಳ್ಳಬೇಕೆಂದು ಉಮೇಶ ಬೋಳಶೆಟ್ಟಿಯವರು ಕರೆ ನೀಡಿದರು.

ಪುರಸಭೆಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಸಾಳೆನ್ನವರ ಅವರು ಮಾತನಾಡಿ ಪರಿಸರ ಸಂರಕ್ಷಣೆ ಒಂದು ದಿನದ ಕಾರ್ಯವಲ್ಲ., ಅದು ನಿರಂತರವಾದ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ನಾವು ನೀವೆಲ್ಲರೂ ಪರಿಶುದ್ಧ ಮನಸ್ಸಿನಿಂದ ಭಾಗಿಯಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಸುವರ್ಣಾ ಮಾದರ ಹಾಗೂ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದು, ವಿವಿಧ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿಕೊಂಡರು.