ಅಕ್ರಮ ಓಸಿ, ಮಟ್ಕಾ ಅಡ್ಡೆ ಮೇಲೆ ರೈಡ್.! ಓರ್ವ ಬುಕ್ಕಿ ಸೇರಿ 8 ಜನ ಖಾಕಿ ಬಲೆಗೆ.!

ಹಳಿಯಾಳ: ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಕೇಂದ್ರ ಕಚೇರಿಯ ವಿಶೇಷ ಪತ್ತೆ ದಳ ಮತ್ತು ಹಳಿಯಾಳ ಪೋಲಿಸರ ಜಂಟಿ ಕಾರ್ಯಾಚರಣೆಯಲ್ಲಿ ಓಸಿ, ಮಟಕಾ, ಜುಗಾರಾಟ ನಡೆಸುತ್ತಿದ್ದ ಪಟ್ಟಣದ ಓರ್ವ ಬುಕ್ಕಿ ಸೇರಿ ಒಟ್ಟು 8 ಜನರನ್ನು ಬಂಧಿಸಿರುವ ಘಟನೆ ಶುಕ್ರವಾರ ಸಂಜೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.

ಮೊನ್ನೆಯಷ್ಟೇ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ ಅವರಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಹಳಿಯಾಳ ತಾಲೂಕಿನಲ್ಲಿ ಮಿತಿಮಿರಿ ಓಸಿ, ಮಟಕಾ, ಜುಗಾರಾಟ ಮತ್ತು ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದ್ದರು‌. ಅಂದು ಸಭೆಯಲ್ಲಿ ಎಸ್ಪಿ ಪೆನ್ನೇಕರ ಅವರು 15 ದಿನಗಳಲ್ಲಿ ಅಕ್ರಮಗಳ ಮೇಲೆ ನಿಯಂತ್ರಣ ಸಾಧಿಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎಸ್ಪಿ ಡಾ.ಸುಮನ ಪೆನ್ನೇಕರ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಾಂತರ ಭಾಗದಲ್ಲಿ ಓ.ಸಿ, ಮಟಕಾ, ಜುಗಾರಾಟ ನಡೆಸುತ್ತಿದ್ದವರ ವಿರುದ್ಧ ವಿಶೇಷ ಪತ್ತೆದಳ ಮತ್ತು ಹಳಿಯಾಳ ಪೋಲಿಸರು ಶುಕ್ರವಾರ ಏಕ ಕಾಲದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓ.ಸಿ ಮಟಕಾ ಜೂಗಾರಾಟದ ಬುಕ್ಕಿಯಾದ ಪಟ್ಟಣದ ಚಂದ್ರಕಾಂತ ಸಿದ್ದಪ್ಪ ಗೊಂದಳಿ, ಆಟ ನಡೆಸುವವರಾದ ಭಾಗವತಿ ಗ್ರಾಮದ ಮುನೀರ್ ಮಹಮ್ಮದ ಸಾಬ ಬಳಗಾರ, ಮೈಕಲ್ ಸೈಮನ್ ಸಿದ್ದಿ, ಪಟ್ಟಣದ ಜಾಕೀರಹುಸೇನ್ ಮಹಮ್ಮದ್ ಹನೀಪ್ ಸನದಿ,
ಅರ್ಲವಾಡ ಗ್ರಾಮದ ಅಕ್ಬರ್ ನನ್ನೆಸಾಬ, ಮುತ್ತಲಮುರಿ ಗ್ರಾಮದ ಸುನೀಲ್ ಮಂಜುನಾಥ ವಡ್ಡರ, ಮುರ್ಕವಾಡ ಗ್ರಾಮದ ಉಮೇಶ ಯಲ್ಲಪ್ಪ ಘಟಕಾಂಬ್ಳೆ, ಹವಗಿ ಗ್ರಾಮದ ಆಸಿಪ್ ಇಮಾಮಹುಸೇನ ಹುಲಕೊಪ್ಪ ಇವರುಗಳನ್ನು ಬಂಧಿಸಲಾಗಿದೆ.

ಇನ್ನು ದಾಳಿಗೆ ಸಂಬಂಧಿಸಿದಂತೆ ಹಳಿಯಾಳ ಠಾಣೆಯಲ್ಲಿ ಪ್ರತ್ಯೇಕ 7 ಪ್ರಕರಣಗಳು ದಾಖಲಾಗಿದ್ದು 8 ಜನರ ಬಂಧನವಾದಂತಾಗಿದೆ. ಸಿಪಿಐ ರಂಗನಾಥ ನಿಲಮ್ಮನವರ ಮತ್ತು ಪಿಎಸ್ ಐ ವಿನೋದ ರೆಡ್ಡಿ ಅವರು ಪ್ರಕರಣ‌ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.