ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಗದೀಪ್ ಧನ್‌ಕರ್ ಮತ್ತು ವಿರೋಧ ಪಕ್ಷಗಳ ಸಹಮತ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ.
ಇಂದು ಮತದಾನ ನಡೆದ ತಕ್ಷಣವೇ ಮತ ಎಣಿಕೆ ನಡೆಯಲಿದೆ. ಸಂಜೆ ವೇಳೆಗೆ ಚುನಾವಣಾ ಅಧಿಕಾರಿಗಳು ನೂತನ ಉಪರಾಷ್ಟ್ರಪತಿಗಳ ಹೆಸರನ್ನು ಪ್ರಕಟಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಕೇಂದ್ರ ಸಚಿವರು, ಸಂಸದರು, ವಿರೋಧ ಪಕ್ಷದ ಸದಸ್ಯರು ಉಪರಾಷ್ಟ್ರಪತಿಗಳ ಆಯ್ಕೆಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ನೂತನ ಉಪರಾಷ್ಟ್ರಪತಿಗಳ ಆಯ್ಕೆಗೆ ಸಂಸತ್ತಿನ ಉಭಯ ಸದನಗಳ ಸದಸ್ಯರು ಮತ ಚಲಾಯಿಸಲಿದ್ದಾರೆ. ಎನ್‌ಡಿಎ ಪರವಾಗಿ ಕಣಕ್ಕಿಳಿದಿರುವ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಧನಕರ್ ಗೆಲ್ಲುವುದು ಬಹುತೇಕ ಖಚಿತವಾಗಿದೆ.
ಇನ್ನು ವಿರೋಧ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆಯಿಂದ ಸಹಮತಕ್ಕೆ ಬರುವಲ್ಲಿ ಗೊಂದಲ ಉಂಟಾಗಿದೆ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತದಾನದಿಂದ ದೂರ ಇರಲು ನಿರ್ಧರಿಸಿದೆ.
ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ವೆಂಕಯ್ಯ ನಾಯ್ಡು ಅಧಿಕಾರಾವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದ್ದು, ಉಪರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಪತಿಗಳೂ ಆಗಿರುತ್ತಾರೆ.