ಭಟ್ಕಳ: ತಾಲೂಕಿನ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡಕುಸಿತ ಉಂಟಾಗಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡುಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ಗ್ರಾಮದಲ್ಲಿ ಧರೆ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದರು.
ಇದೇ ಭಾಗದಲ್ಲಿ ಇದೀಗ ಮತ್ತೆ ಧರೆ ಕುಸಿದಿದ್ದು ಸುತ್ತಲಿನ ಮನೆಗಳಲ್ಲಿನ ಜನರನ್ನು ಸ್ಥಳೀಯ ಆಡಳಿತ ಬೇರೆಡೆಗೆ ಸ್ಥಳಾಂತರ ಮಾಡಿದೆ. ಹತ್ತಕ್ಕೂ ಅಧಿಕ ಮನೆಗಳ ಜನರು ಇದೀಗ ತಮ್ಮ ಮನೆಗಳನ್ನು ತೊರೆದಿದ್ದು ಮಳೆ ಕೂಡ ಸುರಿಯುತ್ತಿರುವ ಹಿನ್ನಲೆ ಗುಡ್ಡ ಕುಸಿತ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದೀಗ ಗುಡ್ಡ ಕುಸಿತದಿಂದಾಗಿ ಮೇಲ್ಭಾಗದಲ್ಲಿದ್ದ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಈ ಭಾಗದ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ಬದಲಿಸಲಾಗಿದೆ. ಈ ಮಾರ್ಗದ ಮೂಲಕ ಸಬ್ಬತ್ತೆ, ಗೆಂಡೆಮೂಲೆ ಗ್ರಾಮಕ್ಕೆ ತೆರಳುತ್ತಿದ್ದವರಿಗೆ ರೈಲ್ವೇ ಬ್ರಿಡ್ಜ್ ಪಕ್ಕದ ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ಗುಡ್ಡ ಕುಸಿತ ಮುಂದುವರೆದ ಬೆನ್ನಲ್ಲೇ ಗ್ರಾಮದ ಹಲವರು ಆತಂಕದಲ್ಲಿ ತಮ್ಮ ಮನೆಗಳನ್ನ ತೊರೆದು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಮಳೆ ಹೆಚ್ಚಳವಾದರೆ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ಮತ್ತಷ್ಟು ಮನೆಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.