ಮಳೆ ಹಾನಿ ಕುರಿತು ಸರ್ವೆಗೆ 11 ತಂಡಗಳ ರಚನೆ: ಶೀಘ್ರ ಸರ್ವೆ ಪೂರ್ಣಗೊಳಿಸಲು ಸೂಚನೆ

ಭಟ್ಕಳ: ತಾಲೂಕಿನಲ್ಲಿ ಆ.1 ಮತ್ತು 2ರಂದು ಸುರಿದ ಭಾರೀ ಮಳೆಗೆ ಅಪಾರ ಹಾನಿಯಾಗಿದ್ದು, ಹಾನಿಯನ್ನು ಅಂದಾಜಿಸಲು 11 ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ಮನೆಗೂ ಭೇಟಿ ನೀಡಿ ಹಾನಿಯ ಕುರಿತು ವಿವರ ಪಡೆಯಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದರು.

ಹಾನಿ ಅಂದಾಜಿಸುವಾಗ ಮನೆ ಹಾನಿ, ಮನೆಯ ಒಳಗೆ ಆಗಿರುವ ಆಹಾರ ಸಾಮಗ್ರಿ, ಬಟ್ಟೆ ಇತ್ಯಾದಿಗಳ ಹಾನಿ, ಜಾನುವಾರು, ಬೆಳೆ ಹಾನಿ, ವಾಣಿಜ್ಯ ಮಳಿಗೆಗಳ ಹಾನಿ ಸೇರಿದಂತೆ ಎಲ್ಲವನ್ನು ಸರ್ವೆ ಮಾಡಲಾಗುತ್ತಿದೆ. ಪ್ರಸ್ತುತ ಮಾನದಂಡದಂತೆ ಮನೆಯೊಳಗೆ ನೀರು ನುಗ್ಗಿ ವಸ್ತುಗಳಿಗೆ ಹಾನಿಯಾದರೆ 10 ಸಾವಿರ ಪರಿಹಾರ ಕೊಡಲು ಅವಕಾಶವಿದೆ. ಉಳಿದ ಪರಿಕರಗಳಿಗೆ, ಮನೆಯ ವಸ್ತುಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳಿಂದ ವಿಶೇಷ ಆದೇಶ ಬರಬೇಕು ಎಂದು ಹೇಳಿದರು.

ಸರ್ವೆ ಮಾಡುವಾಗ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾದ ಕುರಿತು ತನಿಖೆ ಮಾಡಿ ಅಂದಾಜಿಸಲು ತಿಳಿಸಲಾಗಿದೆ. ನೀರು ನುಗ್ಗಿದೆ ಎನ್ನುವ ಕುರಿತು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಕಾರಣ ಒಂದು ಪ್ರದೇಶದಲ್ಲಿ ನೀರು ನುಗ್ಗಿದೆಯೆಂದರೆ ಪ್ರತಿ ಮನೆಗಳಿಗೂ ನೀರು ನುಗ್ಗಿರುತ್ತದೆ. ಒಂದು ಪ್ರದೇಶದಲ್ಲಿ ಒಂದೇ ಮನೆಯಿದ್ದರು ಕೂಡ ಪರಿಶೀಲಿಸಲು ತಿಳಿಸಲಾಗಿದೆ ಎಂದರು.

ಮೀನುಗಾರಿಕಾ ದೋಣಿ, ಬಲೆ ಇತ್ಯಾದಿಗಳಿಗೆ ಹಾನಿಯಾದರೆ ಪ್ರಸ್ತುತ ಮಾನದಂಡದಂತೆ ಪೂರ್ಣ ಹಾನಿಗೆ 9600 ರೂ. ಭಾಗಶ: ಹಾನಿಗೆ 4600 ರೂ. ಬಲೆ ಹಾನಿಯಾದರೆ 2600 ರೂ. ಕೊಡಲು ಅವಕಾಶವಿದೆ. ಮೀನುಗಾರಿಕಾ ಇಲಾಖೆಯಿಂದ ಹಾನಿಗೆ ಅತಿ ಹೆಚ್ಚು ಪರಿಹಾರ ಕೊಡಲು ಅವಕಾಶವಿದೆ ಎಂದರು.

ಕೆಲವು ಕಡೆಗಳಲ್ಲಿ ಸರ್ವೆ ಮಾಡಲು ಬಂದಿಲ್ಲ ಎನ್ನುವ ದೂರು ಕೇಳಿ ಬಂದಿದೆ. ಎಲ್ಲಾ ಕಡೆಗಳಲ್ಲಿಯೂ ಸರ್ವೆ ಮಾಡಲಾಗುವುದು. ತಾಲೂಕಿನಲ್ಲಿ ಅಪಾರವಾದ ಹಾನಿಯಾಗಿದ್ದರಿಂದ ಸರ್ವೆ ಕಾರ್ಯ ತಡವಾಗಿದೆ. ವಾಣಿಜ್ಯ ಮಳಿಗೆಗಳನ್ನು ಸರ್ವೆ ಮಾಡಿ ಹಾನಿಯನ್ನು ಅಂದಾಜಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇವೆ. ಸದ್ಯಕ್ಕೆ ಪರಿಹಾರ ಕೊಡುವ ಅವಕಾಶವಿಲ್ಲ. ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಂಡು ಪರಿಹಾರ ಘೋಷಣೆ ಮಾಡಿದ ನಂತರ ಪರಿಹಾರ ವಿತರಸಲಾಗುವುದು ಎಂದರು.