ಭಟ್ಕಳ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಂಕಾಳ್ ವೈದ್ಯರ ೫೦ನೇ ಹುಟ್ಟುಹಬ್ಬಕ್ಕೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಚಿವ ಸ್ಥಾನವನ್ನು ನೀಡಿ ಬಂಪರ್ ಕೊಡುಗೆ ಕೊಟ್ಟಿದ್ದರೆ, ಸೋಮವಾರ ಮುರುಡೇಶ್ವರದ ತಮ್ಮ ನಿವಾಸದಲ್ಲಿ ೫೦ನೇ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವರು ಕ್ಷೇತ್ರದ ಬಡಜನರಿಗೆ ಬಂದರ್ ಕೊಡುಗೆಯನ್ನು ನೀಡಿದ್ದಾರೆ.
ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು, ಕುಟುಂಬ ಹಾಗೂ ಕಾರ್ಯಕರ್ತರ ನಡುವೆ ಕೇಕ್ ಕತ್ತರಿಸುವುದರ ಮೂಲಕ ಸರಳವಾಗಿ ಜನುಮದಿನಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೂತನ ಸಚಿವರು ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ. ನನಗೆ ಬಡತನದ ಬೇಗೆಯ ಅರಿವಿದೆ. ಅದಕ್ಕಾಗಿ ನಾನು ನನ್ನ ಈ ಐವತ್ತನೇಯ ಜನ್ಮದಿನದ ಸಂದರ್ಭದಲ್ಲಿ ೫೦ ಬಡ ಮಕ್ಕಳಿಗೆ ಅವರು ಬಯಸುವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂಬ ಸಂಕಲ್ಪ ಮಾಡಿಕೊಂಡಿದ್ದು ಇದಕ್ಕಾಗಿ ೫೦ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದೇನೆ. ಅಲ್ಲದೆ ಅನಾಥ ಮಕ್ಕಳು, ವೃದ್ದರಲ್ಲಿ ನನ್ನ ತಂದೆ ತಾಯಿಯನ್ನು ಕಾಣಲಿಕ್ಕಾಗಿ ನನ್ನ ಕ್ಷೇತ್ರದಲ್ಲಿ ಅನಾಥಶ್ರಮ ಮತ್ತು ವೃದ್ಧಾಶ್ರಮ ನಿರ್ಮಾಣದ ಸಂಕಲ್ಪವನ್ನು ತೊಟ್ಟಿದ್ದೇನೆ ಎಂದು ಹೇಳಿದರು.
ನಾನು ಬಡತನದಿಂದಲ್ಲೆ ಬೆಳೆದವನು, ಈ ಹಿಂದೆ ಶಾಸಕನಾಗಿದ್ದಾಗಲೂ ಸಹ ಅನೇಕ ಬಡವರಿಗೆ ಸಹಾಯ ಮಾಡಿದ್ದೇನೆ. ಈಗಲೂ ಅದನ್ನು ಮಾಡುತ್ತೇನೆ. ನಾನು ಬಡವರ ಪರ ಸಚಿವನಾಗಿಯೇ ಇರುತ್ತೆನೆ. ಬಡತನ ಅಂದರೆ ಏನು, ಎನ್ನುವುದನ್ನ ನಾನು ಬಲ್ಲವನಾಗಿದ್ದೇನೆ. ನನ್ನ ಜೀವನ ಸದಾ ಬಡವರ ಪರವಾಗಿದೆ. ಸಚಿವನಾದ ಮಾತ್ರಕ್ಕೆ ನನ್ನಲ್ಲಿ ಯಾವ ಬದಲಾವಣೆ ಆಗಲ್ಲ ಎಂದ ಮಂಕಾಳ್ ವೈದ್ಯ, ತಮ್ಮ ವೇತನದಲ್ಲಿ ಐದು ಲಕ್ಷ ರೂ ಹಣವನ್ನ ಭಟ್ಕಳದ ಪೆದ್ರೋ ಅಂದ ಮಕ್ಕಳ ಶಾಲೆಗೆ ಠೇವಣಿ ಇಡುವುದಾಗಿ ಘೋಷಿಸಿದರು.