ಹಳಿಯಾಳ : ತಾಲೂಕಿನ ಮಂಗಳವಾಡದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಇಂದು ಆಚರಿಸಲಾಯ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ.ಅಮಿತ್ ಅವರು ಗಿಡ ನೆಟ್ಟು, ಮರ ಗಿಡಗಳ ಮಹತ್ವ ಮತ್ತು ಪರಿಸರದ ರಕ್ಷಣೆಯ ಅನಿವಾರ್ಯತೆಯನ್ನು ವಿವರಿಸಿ, ಪರಿಸರವಿದ್ದರೆ ನಾವು ಎನ್ನುವುದನ್ನು ಎಲ್ಲರು ಅರಿತು ಪರಿಸರವನ್ನು ಗೌರವಿಸಿ, ಸಂರಕ್ಷಿಸಿದಾಗ ಮಾತ್ರ ಸಮೃದ್ದ ಪರಿಸರ ತನ್ನ ನಿಜ ಸ್ವರೂಪವನ್ನು ಸದಾ ಕಾಪಾಡಿಕೊಂಡು ಬರಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ನಾವೆಲ್ಲರೂ ಪರಿಸರ ಸಂರಕ್ಷಣೆಯ ಸೇನಾನಿಗಳಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನರ್ಸ್ ಪೂನಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಸ್ಥಳೀಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.