ದಾಂಡೇಲಿ :ದಾಂಡೇಲಿಯಲ್ಲಿ ತಾಲ್ಲೂಕು ಮಟ್ಟದ ಪ್ರವಾಹ ಮತ್ತು ವಿಪತ್ತು ನಿರ್ವಹಣಾ ಸಮಿತಿ ಸಭೆ

ದಾಂಡೇಲಿ : ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಂಟಾಗುವ ವಿಪತ್ತುಗಳ ನಿರ್ವಹಣೆಗೆ ತಾಲ್ಲೂಕಾಡಳಿತ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ ಅವರು ಹೇಳಿದರು.

ಅವರು ದಾಂಡೇಲಿ ನಗರ ಸಭೆಯ ಸಭಾಭವನದಲ್ಲಿ ದಾಂಡೇಲಿ ತಾಲ್ಲೂಕು ಮಟ್ಟದ ಪ್ರವಾಹ ಮತ್ತು ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಎದುರಿಸಿದ ಕ್ರಮಗಳನ್ನು ಮತ್ತು ಪ್ರವಾಹ ಸಂಭವಿಸಬಹುದಾದ ಸ್ಥಳಗಳ ಬಗ್ಗೆ ಮೊದಲೆ ವಿಶೇಷ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕು. ಪ್ರವಾಹ ಮತ್ತು ಅತಿವೃಷ್ಟಿ ಸಂಭವಿಸಿದ್ದ ಸಂದರ್ಭದಲ್ಲಿ ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲು ಈಗಿಂದಲೆ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು. ಈ ಸಂಬಂಧ ತಾಲ್ಲೂಕಿನ ಎಲ್ಲ ಇಲಾಖೆಗಳು ಮತ್ತು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಾಲ್ಲೂಕಾಡಳಿತದ ಜೊತೆಗೆ ಕೈಜೋಡಿಸಬೇಕೆಂದು ಜಯಲಕ್ಷ್ಮೀ ರಾಯಕೋಡ ಅವರು ಕರೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಪೌರಾಯುಕ್ತರಾದ ಆರ್.ಎಸ್.ಪವಾರ್, ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ತಾಲ್ಲೂಕಿನ ಗ್ರಾಮ ಪಂಚಾಯ್ತು ಪಿಡಿಓ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಬೈಟ್ : ಜಯಲಕ್ಷ್ಮೀ ರಾಯಕೋಡ, ಸಹಾಯಕ ಆಯುಕ್ತೆ,