ಬೆಂಗಳೂರು: ನಿನ್ನೆ ಸಂಜೆಯಿಂದ ಸುರಿದ ಮಹಾಮಳೆಗೆ ಸಿಲಿಕಾನ್ ಸಿಟಿ ಅಕ್ಷರಶಃ ಮುಳುಗಡೆಯಾಗಿದೆ. ಹಲವೆಡೆ ರಸ್ತೆಗಳು ಮಾಯವಾಗಿದ್ದು, ಕೆಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಅಂಡರ್‌ಪಾಸ್‌ಗಳು ಕೆರೆಗಳಂತಾಗಿದೆ.
ರಾಜಧಾನಿಯ ಹಲವು ಜಂಕ್ಷನ್, ಅಂಡರ್ ಪಾಸ್ ಹಾಗೂ ಫ್ಲೈಓವರ್‌ಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಶಿವಾಜಿನಗರ, ಮಂತ್ರಿಮಾಲ್ ಮುಂಭಾಗ, ಜಯನಗರದ ಸೌತ್ ಎಂಡ್ ಸರ್ಕಲ್, ಓಕಳಿಪುರ ಸೇರಿ ವಿವಿಧೆಡೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.
ಅಬ್ಬರದ ಮಳೆಗೆ ಮೆಜೆಸ್ಟಿಕ್ ಬಳಿ ಗೋಡೆ ಕುಸಿದು ಆರು ಕಾರುಗಳು ಜಖಂಗೊಂಡಿವೆ. ಶೇಷಾದ್ರಿಪುರಂ ಪೊಲೀಸ್ ಠಾಣೆ ಮುಂದೆ ರಸ್ತೆಯ ಟಾರು ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಎಚ್.ಎ.ಎಲ್ 2 ನೇ ಹಂತ ಇಂದಿರಾನಗರದ 17 ನೇ ಬಿ ಮೈನ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿಯಿಡಿ ಮನೆಗೆ ನುಗ್ಗಿರುವ ಮಳೆ ನೀರನ್ನು ಜನ ಹೊರಹಾಕುತ್ತಿದ್ದಾರೆ.
ಒಳಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡದಿರುವುದೇ ನೀರು ನುಗ್ಗಲು ಕಾರಣ. ಕಳೆದ ಆರು ವರ್ಷಗಳಿಂದ ಮಳೆ ಬಂದಾಗ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಭಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜಧಾನಿಯಲ್ಲಿಮಳೆಯಿಂದ ಆಗುತ್ತಿರುವ ಅವಾಂತರಗಳ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ. ಮಳೆಯಿಂದ ಬೆಂಗಳೂರಿನ 2 ಕ್ಷೇತ್ರಗಳಲ್ಲಿ ಸಮಸ್ಯೆ ಉಂಟಾಗಿತ್ತು. ಏನೇ ಸಮಸ್ಯೆ ಆದರೂ ಅದನ್ನು ಎದುರಿಸುವ ಸಾಮರ್ಥ್ಯ ಸರ್ಕಾರಕ್ಕಿದೆ. ಮಳೆಯಿಂದ ಎದುರಾಗುವ ಸಮಸ್ಯೆಯ ನಿರ್ವಹಣೆಗೆ ಎಸ್.ಡಿ.ಆರ್.ಎಫ್ ಬಲಪಡಿಸಿದ್ದೇವೆ. ನಿರಂತರ ಮಳೆಯಿಂದಾಗಿ ಬೆಂಗಳೂರಲ್ಲಿ ರಸ್ತೆ ಗುಂಡಿ ಸಮಸ್ಯೆ ಎದುರಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.