ಮಂಡಿಯಲ್ಲಿ ನಡೆಯುವ ಬೃಹತ್ ರ್ಯಾಲಿಯಲ್ಲಿ ‘ನಮೋ’ ಭಾಷಣ: ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ತಯಾರಿ.!

ಹಿಮಾಚಲ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಇಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಯುವ ರ್ಯಾಲಿಯಲ್ಲಿ ಬಾಗವಹಿಸಿ ಮಾತನಾಡಲಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ವತಿಯಿಂದ ಮಂಡಿಯ ಪದ್ದಲ್ ಮೈದಾನದಲ್ಲಿ ‘ಯುವ ವಿಜಯ್ ಸಂಕಲ್ಪ ರ್ಯಾಲಿ’ ಆಯೋಜಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮಧ್ಯಾಹ್ನ 1:30 ರಿಂದ 2:00 ರವರೆಗೆ 20 ನಿಮಿಷಗಳ ಭಾಷಣ ಮಾಡಿ ನಂತರ ದೆಹಲಿಗೆ ಹಿಂತಿರುಗಲಿದ್ದಾರೆ.

ಪ್ರಧಾನಿ ಮೋದಿಯವರ ಆಗಮನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳ ನಡೆಯದಂತೆ 1800 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನೂ ರ್‍ಯಾಲಿಗೆ ಸುಮಾರು 1600 ಮತ್ತು 200 ಪೊಲೀಸ್ ಗೃಹ ರಕ್ಷಕ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಂದು ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ. ಸಭೆ ನಡೆಯುವ ಸ್ಥಳದ ಸುತ್ತ 150 ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರ್‍ಯಾಲಿ ಸ್ಥಳವನ್ನು ಡ್ರೋನ್ ಕ್ಯಾಮೆರಾಗಳ ಮೂಲಕವೂ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇನ್ನು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ರ್ಯಾಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಗುಡ್ಡಗಾಡು ರಾಜ್ಯದಲ್ಲಿ ರಾಜಕೀಯ ಬಿಸಿ ಏರಿದೆ. ಆಡಳಿತಾರೂಢ ಬಿಜೆಪಿಯು ‘ಮಿಷನ್ ರಿಪೀಟ್’ ಸಾಧಿಸಲು ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರವನ್ನು ಮರಳಿ ಪಡೆಯುವ ತವಕದಲ್ಲಿದೆ. ಇನ್ನು ಎಎಪಿ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಯನ್ನು ಮಾಡಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಜೆಪಿಯ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ರ್ಯಾಲಿಯೊಂದಿಗೆ ಪ್ರಾರಂಭಿಸಲು ಸಿದ್ಧರಾಗಿದ್ದಾರೆ.