ಕಾರವಾರ: ಪ್ರಧಾನಿ ಮೋದಿ ಸಂಕಲ್ಪದ ಬಳಿಕ ಸ್ವಚ್ಛ ಅಭಿಯಾನದಲ್ಲಿ ದೇಶದ ಜನತೆಯೂ ಭಾಗಿಯಾಗಿದ್ದಾರೆ. ಸ್ವಚ್ಛತೆಯ ಕಾರಣದಿಂದ ರೋಗಗಳೂ ಕಡಿಮೆಯಾಗಿದೆ ಎಂದು ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ ಅಂಗವಾಗಿ ಕಾರವಾರಕ್ಕೆ ಭೇಟಿ ನೀಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು. ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಅಭಿಯಾನವು ಪ್ರತಿ ದಿನವೂ ನಡೆಯಲಿ. ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ 75 ದಿನಗಳ ಕಾಲ ಕಡಲ ಸ್ವಚ್ಚತಾ ಕಾರ್ಯ ನಡೆಯಲಿದೆ. ಇದಕ್ಕಾಗಿ ಮೊಬೈಲ್ ಆ್ಯಪ್ ‘ಇಕೋ ಮಿತ್ರ’ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿನ ಬಹುತೇಕರ ಆದಾಯವು ಮೀನುಗಾರಿಕೆಯಿಂದ ಬರುತ್ತಿದೆ. ಸಮುದ್ರ ಕಲುಷಿತವಾಗುತ್ತಿದ್ದು, ಪ್ಲಾಸ್ಟಿಕ್ ನಂತಹ ತ್ಯಾಜ್ಯಗಳಿಂದ ಜಲಚರಗಳಿಗೆ ತೊಂದರೆಯಾಗಿ ಪರಿಸರ ಸಮತೋಲನ ಹಾಳಾಗುತ್ತಿದೆ. ಇದನ್ನು ದೂರ ಮಾಡಬೇಕೆಂದರೆ ಮನೆ, ಚರಂಡಿ, ನದಿಗಳನ್ನು ಸ್ವಚ್ಛವಾಗಿಡಬೇಕು. ಇದರಿಂದ ತನ್ನಿಂದತಾನೇ ಸಮುದ್ರ ಸ್ವಚ್ಛವಾಗಲಿದೆ.ಮೋದಿ ನೇತೃತ್ವದಲ್ಲಿ ನಡೆಯುವ ಅಭಿಯಾನದಲ್ಲಿ ನಾವೂ ಭಾಗಿಯಾಗಿ, ನೆರೆಯವರನ್ನು ಪ್ರೇರೇಪಿಸಬೇಕು. ಇದೊಂದು ದೊಡ್ಡ ಕರ್ತವ್ಯದ ಹೊಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಡಿಸಿ ಮುಲ್ಲೈ ಮುಗಿಲನ್, ಎಸ್ಪಿ ಸುಮನ ಪನ್ನೇಕರ್, ಸಿಇಓ ಪ್ರಿಯಾಂಗಾ.ಎಂ ಮುಂತಾದವರು ಭಾಗವಹಿಸಿದ್ದರು.