ಮೋದಿ ಜನ್ಮದಿನದ ಅಂಗವಾಗಿ 3 ಗಂಟೆ ತಡೆರಹಿತ ಮ್ಯಾರಥಾನ್: ಮತದಾನದ ಕುರಿತು ಜಾಗೃತಿ

ನವದೆಹಲಿ: ಇಂದು ಪ್ರಧಾನಿ ಮೋದಿ 72 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೋದಿ ಜನ್ಮದಿನದ ಅಂಗವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿ ನಿವಾಸಿ ಹಾಗೂ ಕರ್ನಾಟಕ ಹೈಕೋರ್ಟ್‌ನ ಕೇಂದ್ರ ಸರ್ಕಾರಿ ವಕೀಲ ಮೋಹನ್ ಕುಮಾರ್ ದಾನಪ್ಪನವರು ಮತದಾನ ಜಾಗೃತಿಗಾಗಿ 3 ಗಂಟೆಗಳ ಕಾಲ ತಡೆರಹಿತ ಮ್ಯಾರಥಾನ್ ಓಟ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.

ಈ ಜಾಗೃತಿ ಓಟಕ್ಕೆ ಭಾರತ ಸರ್ಕಾರದ ಸುಪ್ರೀಂಕೋರ್ಟ್ ನ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ರಾಷ್ಟ್ರಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ಬಲಗೈನಲ್ಲಿ ರಾಷ್ಟ್ರಧ್ವಜ, ಎಡಗೈನಲ್ಲಿ ಕರ್ನಾಟಕ ಧ್ವಜವನ್ನ ಹಿಡಿದು ಕರ್ನಾಟಕ ಭವನದಿಂದ ಓಟ ಪ್ರಾರಂಭಿಸಿದ ಮೋಹನ್ ಕುಮಾರ್ ದಾನಪ್ಪ ಇಂದಿರಾ ಗಾಂಧಿ ಸ್ಮಾರಕ, ರಾಯಭಾರಿ ಕಚೇರಿ ಅಕ್ಬರ್ ರಸ್ತೆ, ಇಂಡಿಯಾ ಗೇಟ್, ಜನಪಥ್ ರಸ್ತೆ, ಸುಪ್ರೀಂಕೋರ್ಟ್, ರಾಜ್ ಘಾಟ್, ರಾಷ್ಟ್ರಪತಿ ಭವನ ಮೂಲಕ ಕೆಂಪುಕೋಟೆಗೆ ತಲುಪಿದರು.

ಮತದಾನ ನಮ್ಮ ಸಾಂವಿಧಾನಿಕ ಹಕ್ಕು, ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯ. ಮತದಾನ ಮಾಡಬೇಕಾದ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿರುವುದು ಮತ್ತು ಜವಾಬ್ದಾರಿಗಳ ಬಗ್ಗೆ ಉದಾಸೀನ ತೋರುತ್ತಿರುವುದರಿಂದ ಚುನಾವಣೆಗಳಲ್ಲಿ ಮತದಾನ ಶೇಕಡಾ ನೂರರಷ್ಟು ತಲುಪಲು ಅಸಾಧ್ಯವಾಗಿದೆ. ಮುಂಬರುವ ವಿಧಾನಸಭಾ, ಲೋಕಸಭಾ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ.

– ಮೋಹನ್ ಕುಮಾರ್ ದಾನಪ್ಪ, ವಕೀಲ