ಮಧ್ಯಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದರು.
ಪ್ರಧಾನಿ ಮೋದಿ ಉದ್ಯಾನವನದ ಆವರಣ ನಂಬರ್ ಒಂದರಿಂದ ಎರಡು ಚೀತಾಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಸುಮಾರು 70 ಮೀ. ದೂರದಲ್ಲಿರುವ ಎರಡನೇ ಆವರಣದಿಂದ ಮತ್ತೊಂದು ಚೀತಾಯನ್ನು ಬಿಡುಗಡೆ ಮಾಡಿದ್ದಾರೆ.
ಚೀತಾಗಳು 1952 ರಲ್ಲಿ ಭಾರತದಿಂದ ನಿರ್ನಾಮವಾದವು ಎಂದು ಘೋಷಿಸಲಾಯಿತು. ಆದರೆ ಇಂದು 5 ಹೆಣ್ಣು ಮತ್ತು 3 ಗಂಡು ಸೇರಿ ಒಟ್ಟು 8 ಚೀತಾಗಳನ್ನು ಆಫ್ರಿಕಾದ ನಮೀಬಿಯಾದಿಂದ ‘ಪ್ರಾಜೆಕ್ಟ್ ಚೀತಾ’ ಭಾಗವಾಗಿ ತರಲಾಗಿದೆ. ದೇಶದ ವನ್ಯಜೀವಿ ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಸಲುವಾಗಿ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಚೀತಾ ಸ್ಥಳಾಂತರ ಯೋಜನೆಯ ಭಾಗವಾಗಿ ಎಂಟು ಚಿರತೆಗಳನ್ನು ಗ್ವಾಲಿಯರ್‌ನಲ್ಲಿ ಸರಕು ವಿಮಾನದಲ್ಲಿ ತರಲಾಗಿದೆ. ಬಳಿಕ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಗ್ವಾಲಿಯರ್ ಏರ್ ಫೋರ್ಸ್ ಸ್ಟೇಷನ್‌ನಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಿದೆ. ಉಪಗ್ರಹದ ಮೂಲಕ ನಿಗಾವಹಿಸಲು ಎಲ್ಲಾ ಚೀತಾಗಳಿಗೂ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಪ್ರತಿ ಚೀತಾಕ್ಕೂ ನಿಗಾ ತಂಡವನ್ನು ಮೀಸಲು ಮಾಡಿದ್ದು, 24 ಗಂಟೆಯೂ ಮೇಲ್ವಿಚಾರಣೆ ಮಾಡಲಿದೆ.