ನವದೆಹಲಿ: ಸುಕೇಶ್ ಚಂದ್ರಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಸಮನ್ಸ್ ಜಾರಿ ಮಾಡಿದ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಬೆಳಗ್ಗೆ 11:30 ರಿಂದ ವಿಚಾರಣೆ ಆರಂಭವಾಗಿದ್ದು, ರಾತ್ರಿ 8:30 ವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿದೆ. ಒಟ್ಟು ಮೂರು ಹಂತಗಳಲ್ಲಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ನಿಂದ ಬೆಲೆ ಬಾಳುವ ಗಿಫ್ಟ್ ಪಡೆದಿರುವ ಹಿನ್ನಲೆಯಲ್ಲಿ ನಟಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಜಾಕ್ವೆಲಿನ್, ಸುಕೇಶ್ ಚಂದ್ರಶೇಖರ್‌ನಿಂದ 2.5 ಕೋಟಿ ಮೌಲ್ಯದ ಮೂರು ಕಾರುಗಳನ್ನು, ಮೂಬೈಲ್ ಫೋನ್‌ಗಳನ್ನು, ನಾಲ್ಕು ಪರ್ಷಿಯನ್ ಬೆಕ್ಕುಗಳು, ಗುಸ್ಸಿ ಮತ್ತು ಶನೆಲ್‌ನಿಂದ ಡಿಸೈನರ್ ಬ್ಯಾಗ್‌ಗಳು ಮತ್ತು ಒಂದು ಜೋಡಿ ಲೂಯಿ ವಿಟಾನ್ ಶೂಗಳನ್ನು ಸೇರಿ ಹಲವು ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ.
ಪ್ರಸ್ತುತ ಜೈಲಿನಲ್ಲಿರುವ ಚಂದ್ರಶೇಖರ್ ಫೋರ್ಟಿಸ್ ಹೆಲ್ತ್‌ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಹಲವು ಶ್ರೀಮಂತ ಜನರನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ. ಆಗಸ್ಟ್ 17 ರಂದು ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿ ಇಡಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಕರ್ನಾಟಕದ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಪ್ರಸ್ತುತ ದೆಹಲಿ ಜೈಲಿನಲ್ಲಿದ್ದು 10 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.