ಕಾರವಾರ: ಹೆಣ್ಣು ಮಕ್ಕಳಿಗೆ ಶಿಕ್ಷಣದಿಂದ ಮಾತ್ರ ಸ್ವಾಲಂಬನೆಯ ಬದುಕು ಕಲ್ಪಿಸಲು ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು. ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀ ಶಕ್ತಿ ಸಭಾಭವನದಲ್ಲಿ ಮಂಗಳವಾರ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹಾಗೂ ವಿವಿಧ ಸಂಘಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ತಡೆಗೆ ಕೈಗೊಂಡಿರುವ ಕ್ರಮ ಹಾಗೂ ನಡೆದಿರುವ ಪೋಕ್ಸೋ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಅವರು ಪಡೆದುಕೊಂಡು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳೇ ಮಾಡಬೇಕಾಗಿರುವುದರಿಂದ ಸೂಕ್ತ, ಅರ್ಹರಿಗೆ ಯೋಜನೆಯ ಮಾಹಿತಿ, ಅದರ ಲಾಭ ಲಭ್ಯವಾಗುವಂತೆ ಮಾಡಬೇಕು. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವ ಬಗ್ಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಲ್ಯದಲ್ಲಿ ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯದ ಕೊರತೆ ಇರುವ ಸಾಧ್ಯತೆ ಇದೆ. ಹಲವು ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿಗಳು ಎದುರಾಗುತ್ತದೆ. ಇಂಥ ಪ್ರಕರಣಗಳು ನಡೆಯಬಾರದು. ಹೆಣ್ಣು ಮಕ್ಕಳಲ್ಲಿ ಧೈರ್ಯ ಹೆಚ್ಚಿಸುವ ಕಾರಣದಿಂದ ಮಹಿಳಾ ಸಾಧಕಿಯರಿಂದ ಉಪನ್ಯಾಸ ನೀಡುವ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಸವಲತ್ತುಗಳನ್ನು ಮಹಿಳೆ ಹಾಗೂ ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಇದೆ. ಸಂತ್ರಸ್ಥರಾಗಿರುವ ಮಹಿಳೆಯರು ಅಥವಾ ಪೋಕ್ಸೋ ಕಾಯಿದೆಯಡಿ ಸಖಿ ಹಾಗೂ ಸಾಂತ್ವಾನ ಕೇಂದ್ರಗಳಲ್ಲಿರುವ ಹೆಣ್ಣುಮಕ್ಕಳ ಮರು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿದೇರ್ಶಕಿ ಶ್ಯಾಮಲಾ, ಕಾರ್ಮಿಕ ಇಲಾಖೆಯ ಅಧಿಕಾರಿ ಅಕ್ಬರ ಮುಲ್ಲಾ ಮುಂತಾದವರು ಇದ್ದರು.