ದಾಂಡೇಲಿ: ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ದಾಂಡೇಲಿ ಕನ್ಯಾ ವಿದ್ಯಾಲಯ ಇವರ
ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ವಿದ್ಯಾಲಯ ಸಭಾಭವನದಲ್ಲಿ ವಿಶ್ವ ಪೌಷ್ಟಿಕಾಂಶ ದಿನಾಚರಣೆಯ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜೆ.ಎಮ್.ಎಫ್.ಸಿ, ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪುರ ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಹಳಿಯಾಳದ ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿ ಡಾ. ಕುಮಾರೇಶ್ ನರಕೇರಿ ಮಾತನಾಡಿ ಮುಂಜಾನೆ ಊಟವನ್ನು ರಾಣಿಯಂತೆ, ಮಧ್ಯಾಹ್ನದ ಊಟವನ್ನು ರಾಜನಂತೆ, ರಾತ್ರಿಯ ಊಟವನ್ನು ಸೇವಕನಂತೆ ಮಾಡಬೇಕು. ಆದರೆ, ಇಂದಿನ ಮಕ್ಕಳ ಊಟದಲ್ಲಿ ಪೌಷ್ಠಿಕಾಂಶದ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಜೀವನಶೈಲಿ ಕಾರಣ ಹೀಗಾದರೆ ಸದೃಢ ಆರೋಗ್ಯ ಪಡೆಯುವುದು ಕಷ್ಟ. ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾದ ಹಳಿಯಾಳದ ಡಾ. ಸಂಕೇತ್, ಜೊಯಿಡಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲ್ಪನಾ ಕಾರ್ವೇಕರ ಮಾತನಾಡಿ ಇಂದು ಪೌಷ್ಟಿಕ ಆಹಾರ ಕೊರತೆಯಿಂದ ನಮ್ಮ ಮಕ್ಕಳು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಕಳಪೆ ಸಾಧನೆ ನೋಡಬಹುದು. ನಿತ್ಯ ಮನುಷ್ಯನಿಗೆ 2500 ಕ್ಕೂ ಹೆಚ್ಚು ಕ್ಯಾಲೋರಿ ಆಹಾರ ಬೇಕು ಅದು ಪೌಷ್ಠಿಕ ಗುಣಮಟ್ಟ ಇರಬೇಕು. ಪೌಷ್ಠಿಕಾಂಶಗಳಿಂದ ದೇಹಕ್ಕೆ ಶಕ್ತಿ ಹಾಗೂ ಆರೋಗ್ಯ ಲಭ್ಯ ಎಂದರು.
ಕನ್ಯಾ ವಿದ್ಯಾಲಯದ ಪ್ರಾಂಶುಪಾಲರಾದ ಹನುಮಂತ ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘ ಕಾರ್ಯದರ್ಶಿ ವಿ.ವಾಯ್.ಲಕ್ಷಟ್ಟಿ, ವಕೀಲರಾದ ಎಸ್.ಎಂ.ದಬಗಾರ, ಸೋಮಕುಮಾರ ಎಸ್, ಎಚ್.ಎಸ್.ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.