ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ತೆರಳಿ ಮೊಬೈಲ್ ಕದಿಯುತ್ತಿದ್ದ ವಿದ್ಯಾರ್ಥಿಗಳು.! ಇಬ್ಬರು ಆರೋಪಿಗಳು ರಿಮೈಂಡ್ ಹೋಮ್‌ಗೆ.!

ಹೊನ್ನಾವರ: ಪಟ್ಟಣದ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ಬಾಲಕರಿಂದ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್ ಅಂಗಡಿಗೆ ಭಾನುವಾರದಂದು ಬಂದಿದ್ದ ಇಬ್ಬರು ಹುಡುಗರು ಮೊಬೈಲ್ ಕವರ್ ತೆಗೆದುಕೊಳ್ಳುವ ನೆಪದಲ್ಲಿ ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ಅಂಗಡಿಯಲ್ಲಿದ್ದ ರಿಯಲ್‌ಮಿ ಸಿ-35 ಮೊಬೈಲ್ ಫೋನ್ ಹಾಗೂ ಡೊಂಗಲ್‌ನ್ನು ಕಳವು ಮಾಡಿಕೊಂಡು ಹೋಗಿದ್ದರು. ಮೊಬೈಲ್ ಅಂಗಡಿ ಮಾಲೀಕ ಹಾಡಗೇರಿ ಮುಟ್ಟಾದ ಯೊಗೇಶ ಈಶ್ವರ ಸಣ್ಣನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು.

ಮೊಬೈಲ್ ಕದ್ದು ಪರಾರಿಯಾಗಿದ್ದ ಅಪರಾಧಿಗಳು ಕುಮಟಾದವರಾಗಿದ್ದು, ಈಗಷ್ಟೇ ಎಸ್.ಎಸ್.ಎಲ್.ಸಿ ಓದುತ್ತಿರುವ ಬಾಲಕರು ಎಂದು ತಿಳಿದು ಬಂದಿದೆ. ಮೊಬೈಲ್ ಕಳ್ಳತನ ಮಾಡಿದ ವಿದ್ಯಾರ್ಥಿಗಳು ಸೋಮವಾರ ಹೊನ್ನಾವರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಳೆದ ಭಾನುವಾರ ಅಂಕೋಲಾದಲ್ಲಿಯೂ ಇದೇ ವಿದ್ಯಾರ್ಥಿಗಳು ಮೊಬೈಲ್ ಕಳ್ಳತನ ಮಾಡಿದ್ದರು. ಇವರು ಚಿಕ್ಕಪ್ಪನ ಬೈಕ್ ತೆಗೆದುಕೊಂಡು ಅದರಲ್ಲಿ ಪ್ರಯಾಣ ಮಾಡಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ತಮ್ಮ ತಾಲೂಕು ಬಿಟ್ಟು ಅಕ್ಕಪಕ್ಕದ ತಾಲೂಕನ್ನೇ ಈ ಬಾಲಾಪರಾಧಿಗಳು ಆಯ್ಕೆಮಾಡಿಕೊಳ್ಳುತ್ತಿದ್ದರು. ವ್ಯಾಪಾರದ ಸೋಗಿನಲ್ಲಿ ಹೋಗಿ ಅಂಗಡಿಯವರ ಕಣ್ಣು ತಪ್ಪಿಸಿ ಕದ್ದು ಪರಾರಿಯಾಗುತ್ತಿದ್ದರು. ಪ್ರಕರಣದ ಬೆನ್ನು ಹತ್ತಿದ ಹೊನ್ನಾವರ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಾಪರಾಧಿಗಳನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ.