ಇಂದಿನ ಮಕ್ಕಳಲ್ಲಿ ಹಲವು ಕೌಶಲಗಳಿದ್ದು ಪ್ರತಿಭೆಗಳಿಗೆ ಕೊರತೆಯಿಲ್ಲ: ಪ್ರತಿಭಾ ಕಾರಂಜಿ ಉದ್ಘಾಟಿಸಿ ಶಾಸಕಿ ರೂಪಾಲಿ ನಾಯ್ಕ್ ಮಾತು

ಕಾರವಾರ: ತಾಲೂಕಿನ ಅಮದಳ್ಳಿಯಲ್ಲಿ ಶನಿವಾರ ನಡೆದ 2022-23 ನೇ ಸಾಲಿನ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಗಿನ ಮಕ್ಕಳಲ್ಲಿ ಹಲವು ಕೌಶಲಗಳಿದ್ದು ಪ್ರತಿಭೆಗಳ ಕೊರತೆ ಇಲ್ಲ. ಎಲ್ಲರಲ್ಲೂ ಭಿನ್ನ ಭಿನ್ನ ಪ್ರತಿಭೆಯನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಆ ಮಗು ಏನು ಸಾಧನೆ ಮಾಡುತ್ತದೆ ಎಂಬುದನ್ನು ಪಾಲಕರಿಗಿಂತ ಶಿಕ್ಷಕರಿಗೆ ಹೆಚ್ಚು ಅರಿವು ಇರುತ್ತದೆ ಎಂದರು.

ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಕೇವಲ ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲದೇ, ಕ್ರೀಡೆ ಮತ್ತು ಓದಿನಲ್ಲಿಯೂ ಕೂಡಾ ಮಕ್ಕಳು ಮುಂದೆ ಇದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಮದಳ್ಳಿ ಹಾಗೂ ತೋಡುರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.