ಕಾರವಾರ: ಸಾಮಾಜಿಕ ಅಸ್ಪೃಶ್ಯತೆ, ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ಮೂಢ ಆಚರಣೆಗಳು ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ಮತ್ತು ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಾಗಿ ಜೀವನ ಪರ್ಯಂತ ಶ್ರಮಿಸಿದ ದಾರ್ಶನಿಕರೆಂದರೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಕಾರವಾರ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ಹೇಳಿದರು.
ತಾಲೂಕಾಡಳಿತ, ತಾಲೂಕು ಪಂಚಾಯತ ಕಾರವಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ಜಾತಿ, ಲಿಂಗ, ಧರ್ಮ ಆಧಾರದ ತಾರತಮ್ಯದ ವಿರುದ್ಧ ಜೀವನ ಪರ್ಯಂತ ಹೋರಾಡಿದ್ದಾರೆ. ಸ್ತ್ರೀ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ್ದಾರೆ. ಅಂತವರ ಜೀವನ ಚಿತ್ರಣವನ್ನು ನಾವು ತಿಳಿದುಕೊಳ್ಳಬೇಕು. ಮುಂದಿನ ಯುವ ಪೀಳಿಗೆಗೂ ಈ ಕುರಿತು ತಿಳಿಸಬೇಕಾದುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದರ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡುವುದು ಹಿರಿಯರ ಕರ್ತವ್ಯವಾಗಿದೆ ಎಂದರು.
ಉಪನ್ಯಾಸಕ ಸತೀಶ್ ನಾಯ್ಕ ಮಾತನಾಡಿ, ಜಾತಿ ವ್ಯವಸ್ಥೆ, ಧಾರ್ಮಿಕ ಮೂಢನಂಬಿಕೆ ವಿರುದ್ಧ ಮತ್ತು ಸ್ತ್ರೀ ಸ್ವಾತಂತ್ರ್ಯ, ಗೌರವ, ಸಮಾನತೆಗಾಗಿನಾರಾಯಣ ಗುರುಗಳುಧ್ವನಿ ಎತ್ತಿದ್ದಾರೆ. ಅಸ್ಪೃಶ್ಯತೆಯನ್ನು ವಿರೋಧಿಸಿ ಸಾಮಾಜಿಕ ಹಾಗೂ ಧಾರ್ಮಿಕ ಕಂದಾಚಾರ, ಮೂಢನಂಬಿಕೆ ಆಚರಣೆಗಳನ್ನು ಬದಲಾಯಿಸಲು ಕ್ರಾಂತಿಯನ್ನು ಮಾಡಿದರು. ಒಂದೇ ಮತ, ಒಂದೇಜಾತಿ, ಒಂದೇ ದೇವರು ಎಂದು ಹೇಳಿದ ಅವರು ಎಲ್ಲರ ಆತ್ಮದಲ್ಲೂ ಪರಮಾತ್ಮನಿದ್ದಾನೆ ಎಂದು ಸರ್ವಧರ್ಮ ಸಮನ್ವಯತೆಯನ್ನು ಸಾರಿದ್ದಾರೆ ಎಂದರು.
ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ, ಗ್ರೇಡ್ 2 ತಹಶೀಲ್ದಾರ ಶ್ರೀದೇವಿ ಭಟ್, ನಾಮಧಾರಿ ಸಮುದಾಯದ ಮುಖಂಡ ಎನ್. ಜಿ. ನಾಯಕ್, ರಾಮಾ ನಾಯ್ಕ, ಸುನೀಲ ಸೋನಿ, ಶಿಕ್ಷಕ ಗಣೇಶ್ ಬಿಸ್ಟಣ್ಣನವರ, ತಾಲೂಕು ಪಂಚಾಯತ ಸಿಬ್ಬಂದಿ, ನಗರಸಭೆ ಸದಸ್ಯರು ಹಾಗೂ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.