ಪೊಲೀಸ್ ಅಧಿಕಾರಿ ಸೇರಿದಂತೆ ಮೂವರ ವಿರುದ್ದ ಮಾನನಷ್ಟ ಮೊಕದ್ದಮೆ – ರಾಘು ನಾಯ್ಕ

ಕಾರವಾರ: 2017 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತನ್ನ ಮೇಲೆ ದಾಖಲಾಗಿದ್ದ ಪ್ರಕರಣವು ಸಾಕ್ಷಾಧಾರಗಳಿಲ್ಲದ ಕಾರಣ ನ್ಯಾಯಾಲಯವು ಖುಲಾಸೆಗೊಳಿಸಿದ್ದು ಈ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಒಟ್ಟೂ ಒಂದೂವರೆ ಕೋಟಿ ರೂ. ಮಾನನಷ್ಟ ಮೊಕ್ಕದ್ದಮೆ ಹೂಡುವುದಾಗಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ 2017ರ‌ ಆಗಸ್ಟ್ 13 ರಂದು ನಗರಸಭೆ ಸದಸ್ಯ ರತ್ನಾಕರ ನಾಯ್ಕ ಅವರು ನಗರದ ಮಾಲಾದೇವಿ ಮೈದಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ನನ್ನೊಂದಿಗೆ ಜಗಳ ತೆಗೆದು ಮಾತಿಗೆ ಮಾತಾಗಿತ್ತು. ಆದರೆ ಆ ವೇಳೆ ನಾನು ಯಾವುದೇ ರೀತಿ ಹಲ್ಲೆ ನಡೆಸದಿದ್ದರೂ ತನ್ನನ್ನು ದೂಡಿ ಕೆಳಗೆ ಕೆಡವಿ ಗಾಯಗೊಳಿಸಿದ ಬಗ್ಗೆ ಹಾಗೂ ಚೂರಿಯಿಂದ ಇರಿಯಲು ಬಂದಾಗ ಸ್ಥಳೀಯ ಎನ್. ದತ್ತಾ ಅವರು ಬಂದು ರಕ್ಷಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಬಳಿಕ‌ ಅಂದು ಮಧ್ಯರಾತ್ರಿ ಪೊಲೀಸರು ನಮ್ಮ ಮನೆಗೆ ನುಗ್ಗಿ ಬಂಧಿಸಿ ಕಾರವಾರ ನಗರ ಠಾಣೆಯ ಲಾಕಪ್ ನಲ್ಲಿ ಹಾಕಿದ್ದರು.

ಈ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ಪೊಲೀಸ್ ಅಧಿಕಾರಿ ಶರಣ ಗೌಡ ಮನೆಗೆ ಬಂದು ಬಾಗಿಲನ್ನು ಒದ್ದು ಠಾಣೆಗೆ ಎಳೆ ತಂದಿದ್ದರು. ಅಲ್ಲದೇ ಲಾಕಪ್ ನಲ್ಲಿದ್ದ ನನ್ನ ಫೊಟೋವನ್ನು ವೈರಲ್ ಮಾಡಿದ್ದರು. ಬಳಿಕ ನ್ಯಾಯಾಂಗ ಬಂಧನ ವಿಧಿಸಿ 18 ದಿನಗಳ ಬಳಿಕ ಬಿಡುಗಡೆಯಾಗಿದ್ದೆ ಎಂದು ಹೇಳಿದರು. ಇದೀಗ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ದೂರು ನೀಡಿದ ನಗರಸಭಾ ಸದಸ್ಯರು ಸೂಕ್ತ ಸಾಕ್ಷಿಗಳನ್ನು ಸಲ್ಲಿಸಲಾಗದ ಕಾರಣ ಹಾಗೂ ಸುಳ್ಳು ಮಾಹಿತಿ ನೀಡಿದ ಕಾರಣ ಆರೋಪ ಸಾಬೀತಾಗದೆ ಕೋರ್ಟ್ ಖುಲಾಸೆಗೊಳಿಸಿದೆ ಎಂದರು.

ಇದೀಗ ಪ್ರಕರಣ ದಾಖಲಾದ ದಿನದಂದು ರತ್ನಾಕರ ನಾಯ್ಕ ಅವರಿಗೆ ಚೂರಿ ಇರಿಯಲು ಹೋದಾಗ ತಪ್ಪಿಸಿದ್ದೇನೆ ಎಂದು ಸುಳ್ಳು ಹೇಳಿರುವ ಎನ್. ದತ್ತಾ, ಯಾವುದೇ ಸಂಬಂಧವಿಲ್ಲದಿದ್ದರೂ ನಮ್ಮ ಮನೆಗೆ ಬಂಧಿಸಲು ಬಂದು ಬಳಿಕ ಲಾಕಪ್ ನಲ್ಲಿದ್ದ ಫೊಟೊ ವೈರಲ್ ಮಾಡಿದ ಪೊಲೀಸ್ ಅಧಿಕಾರಿ ಶರಣಗೌಡ ಪಾಟೀಲ್ ಹಾಗೂ ಸುಳ್ಳು ದೂರು ದಾಖಲಿಸಿದ ರತ್ನಾಕರ ನಾಯ್ಕ ಅವರ ವಿರುದ್ಧ ತಲಾ 50 ಲಕ್ಷ ರೂ. ಗಳ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಪಾದ ನಾಯ್ಕ, ಚರಣ ನಾಯ್ಕ, ಶಬ್ಬೀರ ಶೇಖ, ಪ್ರಣಮ ನಾಯ್ಕ, ಶುಭಂ ಆಚಾರಿ, ರೋಹನ ನಾಯ್ಕ‌ ಮುಂತಾದವರು ಇದ್ದರು.