ಹುಬ್ಬಳ್ಳಿ: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಟೆಸ್ಟ್ ಕ್ರಿಕೆಟ್ ಪಂದ್ಯದ ಇಂದಿನ ಇನ್ನಿಂಗ್ಸ್ ಮಳೆಯಿಂದ ರದ್ದಾಗಿದ್ದು, ನಾಲ್ಕು ದಿನದ ಟೆಸ್ಟ್ ಪಂದ್ಯ ನಾಳೆ ಡ್ರಾ ಆಗುವ ಸಾಧ್ಯತೆಯಿದೆ.
ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್ಲಿ ಈ ತಿಂಗಳ 8 ರಿಂದ ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳು ಟೆಸ್ಟ್ ಹಣಾಹಣಿ ನಡೆಸಿದ್ದು, ಈ ಪಂದ್ಯಕ್ಕೆ ಮಳೆ ಕಾಟ ವಿಪರೀತವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಜೊತೆಗೆ ಆಗಾಗ ತುಂತುರು ಮಳೆ ಹಿನ್ನೆಲೆ, ಐದು ಬಾರಿ ಮೈದಾನ ಪರಿಶೀಲನೆ ನಡೆಸಿದ ಆಯೋಜಕರು ಆಟಕ್ಕೆ ಮೈದಾನ ಯೋಗ್ಯವಿಲ್ಲವೆಂದು ಇಂದಿನ ಇನ್ನಿಂಗ್ಸ್ ರದ್ದುಗೊಳಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎರಡನೇಯ ದಿನದಾಟದ ಅಂತ್ಯಕ್ಕೆ 66 ಓವರ್ ಗಳಲ್ಲಿ 6 ವಿಕೇಟ್ ನಷ್ಟಕ್ಕೆ 229 ರನ್ ಕಲೆಹಾಕಿದೆ. ವಿಕೆಟ್ ಕೀಪರ್ ಕೆ ಎಸ್ ಭರತ್ 74 ಮತ್ತು ರಾಹುಲ್ ಚಾಹರ್ 4 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.