ಸಮಾಜಮುಖಿ ಕೆಲಸಗಳಿಗೆ ನಾರಾಯಣ ಗುರುಗಳು ದೊಡ್ಡ ಪ್ರೇರಣೆ – ಸ್ಪೀಕರ್ ಕಾಗೇರಿ

ಶಿರಸಿ: ಸಮಾಜಮುಖಿ ಕೆಲಸ ಮಾಡುವವರಿಗೆ ನಾರಾಯಣಗುರುಗಳು ಬಹು ದೊಡ್ಡ ಪ್ರೇರಣೆ. ಅವರ ವೈಕಂ ಸತ್ಯಾಗ್ರಹ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಅಸ್ಪೃಷ್ಯತೆ ವಿರುದ್ಧದ ಅವರ ಹೋರಾಟ ಸಮಾಜ ಪರಿವರ್ತನೆಗೆ ಕಾರಣವಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದ ಅಂಬೇಡ್ಕರ್ ಸಭಾಭವನದಲ್ಲಿ ಶನಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ನಾರಾಯಣಗುರುಗಳಿಗೆ ಸಿಗಬೇಕಿದ್ದ ಪ್ರಾಮುಖ್ಯತೆ ಅಂದು ಸಿಕ್ಕಿರಲಿಲ್ಲ ಎಂಬ ನೋವು ಎಲ್ಲರಲ್ಲಿದೆ. ಸರ್ಕಾರ ಅವರ ಜಯಂತಿ ಆಚರಣೆ ಮೂಲಕ ಈ ರೀತಿಯಲ್ಲಿ ಅವರಿಗೆ ನ್ಯಾಯ ಒದಗಿಸುತ್ತಿದೆ. ಪರಕೀಯರು, ಬ್ರಿಟೀಷರ ಆಡಳಿತದ ದಿನಗಳಲ್ಲಿ ನಾರಾಯಣ ಗುರುಗಳು ಜನಿಸಿದರು. ಅಂದಿನ ದಿನಗಳಲ್ಲಿ ಕೇರಳದಲ್ಲಿ ಜಾತೀಯತೆ, ಅಸ್ಪ್ರಷ್ಯತೆ ಗರಿಷ್ಠ ಮಟ್ಟದಲ್ಲಿತ್ತು. ಅದನ್ನೆಲ್ಲ ಮೀರಿ ನಿಂತವರು ನಾರಾಯಣ ಗುರುಗಳು.

ದೇವರ ಸೃಷ್ಠಿಯ ಈ ಭೂಮಿಯಲ್ಲಿ ಎಲ್ಲರೂ ಒಂದೇ, ದೈವೀ ಶಕ್ತಿಯ ಅಂಶ ಎಲ್ಲ ಜೀವಿಗಳಲ್ಲಿದೆ ಎಂದು ನಾರಾಯಣಗುರುಗಳು ಬಿಂಬಿಸಿದ್ದರು ಎಂದರು. ದೇಶ ಮೊದಲು ಎಂದು ನಾವು ನಂಬುವವರೆಗೂ ಸುಖದ ಜೀವನ ಸಾಧ್ಯವಾಗುವುದಿಲ್ಲ. ಜಾತಿ ಉಪ ಜಾತಿಯನ್ನೇ ನಾವು ಪ್ರಮುಖ ಮಾಡಿಕೊಂಡರೆ ಉಳಿಗಾಲವಿಲ್ಲ. ನಾರಾಯಣ ಗುರುಗಳ ಜನ್ಮ ದಿನ ಆಚರಣೆ ಮೂಲಕ ನಾವು ಸಂಘಟಿತರಾಗಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಂದನ ಸಾಗರ, ಸಹಾಯಕ ಆಯುಕ್ತ ದೇವರಾಜ ಆರ್, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕೇಶವ ಚೌಗುಲೆ, ಗಣಪತಿ ನಾಯ್ಕ, ದೇವರಾಜ ಹಿತ್ಲಮಕ್ಕಿ, ಡಿಎಸ್ಪಿ ರವಿ ನಾಯ್ಕ ಇತರರಿದ್ದರು. ಇದಕ್ಕೂ ಮುನ್ನ ನಗರದ ಮಾರಿಕಾಂಬಾ ದೇವಾಲಯದಿಂದ ನಾರಾಯಣ ಗುರುಗಳ ಭಾವಚಿತ್ರದ ಆಕರ್ಷಕ ಮೆರವಣಿಗೆ ನಡೆಯಿತು.

ಪೊಟೊ:೧೦ಶಿರಸಿ೫: ಶಿರಸಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.