ನಡುಗಡ್ಡೆಯಲ್ಲಿ ಸಿಲುಕಿದ್ದ ಐವರು ರೈತರ ರಕ್ಷಣೆ.! ಅಗ್ನಿಶಾಮಕದಳದಿಂದ ಯಶಸ್ವಿ ಕಾರ್ಯಾಚರಣೆ.!

ಕೊಪ್ಪಳ: ತಾಲೂಕಿನ ಕೋಳೂರು ಬಳಿಯ ಹಿರೇಹಳ್ಳಕ್ಕೆ ಏಕಾ ಏಕಿ ನೀರು ಹರಿಬಿಟ್ಟದ್ದರಿಂದ ಮೋಟರ್ ತೆಗೆದುಕೊಂಡು ಬರಲು ತೆರಳಿದ್ದ ಐವರು ರೈತರು ನಡುಗಡ್ಡೆಯಲ್ಲಿ ಸಿಲುಕಿದ್ದರು. ಮಾಹಿತಿ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕದಳ ಹಾಗೂ ತಹಶೀಲ್ದಾರ್ ವಿಠ್ಠಲ್ ಚೌಗಾಲ್ ನೇತೃತ್ವದಲ್ಲಿ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಐವರು ರೈತರನ್ನು ರಕ್ಷಣೆ ಮಾಡಿದರು. ಕೋಳೂರು ಗ್ರಾಮದ ಮಹಾಂತೇಶ ಡೊಳ್ಳಿನ, ರಮೇಶ ಡೊಳ್ಳಿನ್, ಬಸವರಾಜ ಗೊಂದಿ ಹೊಸಳ್ಳಿ, ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರುಬರ ರಕ್ಷಣೆ ಮಾಡಲ್ಪಟ್ಟ ರೈತರು ಎಂದು ಗುರುತಿಸಲಾಗಿದೆ.

ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಈಚೆಗೆ ಯಲಬುರ್ಗಾ, ರೋಣ, ಕುಕನೂರು ಭಾಗದಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಹಳ್ಳದ ಒಳ ಹರಿವಿನ ಪ್ರಮಾಣವು ಹೆಚ್ಚಾಗಿದೆ. ಹಾಗಾಗಿ ಮಿನಿ ಡ್ಯಾಂನಿಂದ ಹಳ್ಳದ ಪಾತ್ರಕ್ಕೆ ಹೆಚ್ಚುವರಿ ನೀರು ಹರಿಬಿಡಲಾಗುತ್ತಿದೆ. ಎರಡು ದಿನದ ಹಿಂದಷ್ಟೇ ಹಳ್ಳದ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿತ್ತು. ಆ ಬಳಿಕ ನೀರು ಬಿಡುವಿಕೆ ಪ್ರಮಾಣ ಕಡಿಮೆಯಾಗಿತ್ತು.

ಇದನ್ನರಿತ ತಾಲೂಕಿನ ಕೋಳೂರು ಗ್ರಾಮದ ಈ ಐವರು ರೈತರು ಇಂದು ಹಳ್ಳದ ನಡುಗಡ್ಡೆ ದಂಡೆಯ ಮೇಲೆ ಅಳವಡಿಕೆ ಮಾಡಿದ್ದ ಮೋಟರ್ ಪಂಪಸೆಟ್‌ಗಳನ್ನು ತೆಗೆದುಕೊಂಡು ಬರಲು ತೆರಳಿದ್ದರು. ಆದರೆ ಹಿರೇಹಳ್ಳ ಜಲಾಶಯದಿಂದ ಬೆಳಗ್ಗೆ ಏಕಾ ಏಕಿ ಹಳ್ಳದ ಪಾತ್ರಕ್ಕೆ ನೀರು ಹರಿಬಿಡಲಾಗಿದೆ. ನೀರಿನ ರಭಸ ಹೆಚ್ಚಾಗಿದ್ದರಿಂದ ಈ ಐವರು ರೈತರು ಹಳ್ಳದ ದಂಡೆಗೆ ಬರಲಾರದೇ ತೊಂದರೆ ಎದುರಿಸಿದ್ದಾರೆ. ನೀರಿನಲ್ಲಿ ಸಿಲುಕಿದ ಬಗ್ಗೆ ಸಂಬಂಧಿಕರಿಗೆ, ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಾಲೂಕಾಡಳಿತಕ್ಕೆ ಹಾಗೂ ಅಗ್ನಿಶಾಮಕ ದಳಕ್ಕೂ ರವಾನೆಯಾಗಿದೆ.

ನಡುಗಡ್ಡೆಯಲ್ಲಿ ಸಿಲುಕಿದ ಐವರಲ್ಲಿ ಇಬ್ಬರಿಗೆ ಈಜು ಬರುತ್ತಿದ್ದರೆ, ಇನ್ನು ಮೂವರಿಗೆ ಈಜು ಬರುವುದಿಲ್ಲ. ಇದನ್ನರಿತ ತಾಲೂಕಾಡಳಿತ ಅವರನ್ನು ಅಲ್ಲಿಯೇ ಇರುವಂತೆ ಹೇಳಿ ಅಗ್ನಿಶಾಮಕ ದಳದ ತಂಡದೊಂದಿಗೆ
ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಾಲ ಅವರು ಕಾರ್ಯಾಚರಣೆ ಕೈಗೊಂಡರು. ಬೆಳಗ್ಗೆ 10 ಗಂಟೆಗೆ ತಂಡ ಕಾರ್ಯಾಚರಣೆಗೆ ಇಳಿದು ಕಾರ್ಯಾಚರಣೆ ನಡೆಸಿತು.

ನಡುಗಡ್ಡೆಯಿಂದ ಹಳ್ಳದ ದಂಡೆಗೆ ಕರೆ ತರಲು ಕೇವಲ 15 ನಿಮಿಷ ಸಮಯ ತೆಗೆದುಕೊಂಡಿತು. ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ತಂಡವೇ ಸುದೀರ್ಘ ಸಮಯ ತೆಗೆದುಕೊಂಡು ಕಾರ್ಯಾಚರಣೆ ಯಶಸ್ವಿಗೊಳಿಸಿತು. ಬೋಟ್‌ನಲ್ಲಿ ಎರಡು ಹಂತದಲ್ಲಿ ರೈತರನ್ನು ನಡುಗಡ್ಡೆಯಿಂದ ಹಳ್ಳದ ದಂಡೆಗೆ ಕರೆ ತರುವ ಕಾರ್ಯವೂ ನಡೆಯಿತು. ಆ ಬಳಿಕ ತಹಸೀಲ್ದಾರ್ ಯಾವುದೇ ಕಾರಣಕ್ಕೂ ಹಳ್ಳದ ದಂಡೆಯ ಪ್ರದೇಶಕ್ಕೆ ತೆರಳದಂತೆ ಎಚ್ಚರಿಕೆ ನೀಡಿದರು.