ಮೊಗೇರ ಸಮಾಜದವರಿಗೆ ಪ.ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಗೊಂದಲ ವಿಚಾರ: ಸರ್ಕಾರ ರಚಿಸಿರುವ ಸಮಿತಿಯಿಂದ ಮೊದಲ ಸಭೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿನ ಮೊಗೇರ ಸಮುದಾಯದವರು ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆಯುವಲ್ಲಿ ಗೊಂದಲಗಳು ಉಂಟಾಗಿದ್ದು, ಪ್ರಸ್ತುತ ಪ.ಜಾ. ಪ್ರಮಾಣಪತ್ರವನ್ನು ಪಡೆಯುವಲ್ಲಿ ಅನುಸರಿಸುತ್ತಿರುವ ಮಾನದಂಡಗಳನ್ನು ಪರೀಶೀಲನೆ ನಡೆಸಲು ಭಟ್ಕಳಕ್ಕೆ ಬಂದು ಮೊದಲ ಸಭೆ ನಡೆಸಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ, ಸಮಿತಿ ಅಧ್ಯಕ್ಷ ಜೆ.ಸಿ.ಪ್ರಕಾಶ ಹೇಳಿದರು. ಅವರು ಭಟ್ಕಳದ ತಾಲೂಕು ಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಮೊಗೇರ ಸಮಾಜದವರಿಗೆ ಪ್ರಮಾಣ ಪತ್ರವನ್ನು ನೀಡುವಲ್ಲಿ ಆಗುತ್ತಿರುವ ಗೊಂದಲವನ್ನು ಅಧ್ಯಯನ ಮಾಡಲು ಸರ್ಕಾರ ಈ ಸಮಿತಿ ರಚಿಸಿದೆ. ಅದರ ಸಂಬಂಧ ಮೊಗೇರ ಸಮಾಜದ ಮುಖಂಡರೊಂದಿಗೆ ಮೊದಲ ಸಭೆ ನಡೆಲಾಗಿದೆ. ಅದರಲ್ಲಿ ಅವರ ಅಹವಾಲುಗಳನ್ನು ಆಲಿಸಲಾಗಿದೆ. ಅವರ ಸಂಪ್ರದಾಯ, ಅವರ ಆಚರಣೆ, ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಅವರು ಎಲ್ಲಿಂದ ಬಂದರು, ಅವರ ಕಸುಬುಗಳ ಕುರಿತು ಮಾಹಿತಿ ಪಡೆಯಲಾಗಿದೆ. ಇದನ್ನೆಲ್ಲಾ ಮಾಹಿತಿ ಸಂಗ್ರಹಿಸಿ ಮುಂದಿನ 15 ದಿನಗಳಲ್ಲಿ ಅಧ್ಯಯನ ನಡೆಸಿ ಬಳಿಕ ಮತ್ತೆ ಮುಂದಿನ ಸಭೆ ನಡೆಸಲಾಗುವದು ಎಂದರು.

ಮೊಗೇರ ಸಮಾಜದ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಮುಂದಿನ 2 ತಿಂಗಳ ಒಳಗೆ ಸಂಪೂರ್ಣ ಅಧ್ಯಯನ ನಡೆಸಿ ವರದಿ ಸಲ್ಲಿಸುತ್ತೇವೆ. ಅಲ್ಲಿಯವರೆಗೆ ಧರಣಿಯನ್ನು ಕೈಬಿಡಿ. ಈಗ ಸರ್ಕಾರವೆ ಸಮಿತಿ ರಚನೆ ಮಾಡಿದ್ದು ನಿಮ್ಮ ಗೊಂದಲ ಪರಿಹಾರಕ್ಕೆ ಮುಂದಾಗಿದೆ. ಮಳೆಗಾಲದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ತೊಂದರೆ ನೀಡಬೇಡಿ. ಧರಣಿ ಕೂಡಲೆ ಕೈಬಿಡುವಂತೆ ವಿನಂತಿಸಿದರು. ಮೊಗೇರ ಸಮಾಜದ ಅಧ್ಯಕ್ಷರು ಪ್ರತಿಕ್ರಿಯಿಸಿ ಚರ್ಚೆ ನಡೆಸಿ ಅಭಿಪ್ರಾಯ ತಿಳಿಸುವದಾಗಿ ಹೇಳಿದರು.