ಜನಸ್ಪಂದನ ಸಮಾವೇಶಕ್ಕೆ ಸಿದ್ದು ಟೀಕೆ ವಿಚಾರ: ಶಿವಮೊಗ್ಗದಲ್ಲಿ ಈಶ್ವರಪ್ಪ ಖಡಕ್ ರಿಯಾಕ್ಷನ್.!

ಶಿವಮೊಗ್ಗ: ಬಿಜೆಪಿ ಜನಸ್ಪಂದನ ಸಮಾವೇಶದ ಬಗ್ಗೆ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 75 ಕೋಟಿ ಸಂಗ್ರಹ ಮಾಡಿ ಸಿದ್ದರಾಮೋತ್ಸವ ಮಾಡಿದ್ರಲ್ಲಾ ಅದು ರಾಜಕೀಯ ಪ್ರೇರಿತ. ಕಾರ್ಯಕ್ರಮಕ್ಕೆ ಯಾರು ಯಾರೂ ದುಡ್ಡು ಕೊಟ್ರು.? ಆ ದುಡ್ಡು ಎಷ್ಟು ಖರ್ಚು ಮಾಡಿದ್ರಿ.? ಬಸ್ಸಿಗೆ ಎಷ್ಟು ಕೊಟ್ರಿ.? ಜನರಿಗೆ ಎಷ್ಟು ಕೊಟ್ರಿ ಅದರ ಲೆಕ್ಕ ಕೊಡಿ ಎಂದು ಈಶ್ವರಪ್ಪ ಹರಿಹಾಯ್ದಿದ್ದಾರೆ.

ಒಂದು ಕಾರ್ಯಕ್ರಮ ಮಾಡಿ ಕಾಂಗ್ರೆಸ್ ಸರಕಾರವೇ ಬಂತು ಅಂತಾ ಬೀಗಿಕೊಂಡಿದ್ರು. ಬಿಜೆಪಿ ಇಂತಹ ನೂರು ಕಾರ್ಯಕ್ರಮ ಮಾಡಿದೆ. ಪ್ರಧಾನಿ ಮೋದಿ ಅವರು ಮಂಗಳೂರಿಗೆ ಬಂದಾಗ ಜ‌ನಸಾಗರವೇ ಸೇರಿತ್ತು. ಜನಸ್ಪಂದನ‌ ಬಹಳ ದೊಡ್ಡ ಕಾರ್ಯಕ್ರಮ. ಚುನಾವಣೆಯವರೆಗೂ ಇಂತಹ ಕಾರ್ಯಕ್ರಮ ನಡೆಸುತ್ತಿರುತ್ತೇವೆ. ಇಂತಹ ಕಾರ್ಯಕ್ರಮ ನೋಡಿ ಕಾಂಗ್ರೆಸ್ ನವರಿಗೆ ಸಮಾಧಾನ ಆಗ್ತಿಲ್ಲ. ಇದಕ್ಕೆ ನಾವೇನು ಮಾಡೋಕೆ ಆಗಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಗಣಪತಿ ವಿಸರ್ಜನೆ ವಿಚಾರವಾಗಿಯೂ ಮಾತನಾಡಿದ ಈಶ್ವರಪ್ಪ ಶಿವಮೊಗ್ಗ ಇನ್ನು ಮುಂದೆ ಎಲ್ಲಾ ವಿಚಾರದಲ್ಲೂ ಶಾಂತಿಯಿಂದ ಇರುತ್ತದೆ. ಯಾರೋ ಕೆಲ ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಗೊಂದಲ‌ ಉಂಟುಮಾಡುವ ಪ್ರಯತ್ನ ನಡೆಸಿದ್ದರು. ಸರಕಾರ ಅಂತಹವರಿಗೆ ಸರಿಯಾದ ಬುದ್ಧಿ ಕಲಿಸಿದೆ. ಶಿವಮೊಗ್ಗದ ಇತಿಹಾಸದಲ್ಲೇ ನಿನ್ನೆಯ ಗಣಪತಿ ಉತ್ಸವ ವೈಭವದಿಂದ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ನನ್ನ ಜೀವನದಲ್ಲಿ ಇಷ್ಟೊಂದು ಸಂಭ್ರಮ ನೋಡಿದ್ದು ಇದೇ ಮೊದಲು ಎಂದು ಹೇಳಿದರು.