ಹೊನ್ನಾವರ: ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ರಲ್ಲಿ ಕಾಲೇಜು ವಿಧ್ಯಾರ್ಥಿಗಳಿದ್ದ ಬಸ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರ ನಡೆದಿದೆ.
ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಘಟನೆ ನಡೆದಿದೆ.
ರಸ್ತೆಯ ಪಕ್ಕದಲ್ಲಿನ ತಗ್ಗಿಗೆ ಬಸ್ ಪಲ್ಟಿಯಾಗಿ ಅಪಘಾತವಾಗಿದೆ ಎನ್ನಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ & ಪದವಿ ಪೂರ್ವ ಕಾಲೇಜಿನ 50 ವಿಧ್ಯಾರ್ಥಿಗಳು, 8 ಉಪನ್ಯಾಸಕರು ಹಾಗೂ 2 ಆಡಳಿತ ಮಂಡಳಿಯ ಸದಸ್ಯರು ಸೇರಿ ಒಟ್ಟೂ 60 ಜನರು ಎಮ್.ಆರ್ ಟೂರ್ಸ್ & ಟ್ರಾವೆಲ್ಸ್ ಬಸ್ ನಲ್ಲಿದ್ದರು. ಶೈಕ್ಷಣಿಕ ಪ್ರವಾಸಕ್ಕೆಂದು ಬಂದವರು ಜೋಗದಿಂದ ಮುರ್ಡೇಶ್ವರಕ್ಕೆ ಬರುವಾಗ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ 5 ವಿಧ್ಯಾರ್ಥಿಗಳು, 11 ವಿಧ್ಯಾರ್ಥಿನಿಯರು, 2 ಜನ ಉಪನ್ಯಾಸಕರು ಸೇರಿ 18 ಜನರು ಗಾಯ ಹಾಗೂ ತೀವೃ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಅದ್ರಷ್ಟವಷಾತ್ ಬಸ್ ನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಗಾಯಾಳುಗಳು ಹೊನ್ನಾವರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೀಡಾದ ಬಸ್ ನಲ್ಲಿದ್ದ ಇನ್ನುಳಿದ ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಪ್ರತ್ಯೇಕ ವಾಹನದಲ್ಲಿ ಹೊನ್ನಾವರಕ್ಕೆ ಕರೆತಂದು ತಹಶೀಲ್ದಾರರ ಸಹಕಾರದೊಂದಿಗೆ ಬಿ.ಸಿ.ಎಮ್ ಹಾಸ್ಟೆಲ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲಾ ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ವಿಧ್ಯಾರ್ಥಿಗಳ ಪಾಲಕರು ಅನವಶ್ಯಕ ಆತಂಕಕ್ಕೆ ಒಳಗಾಗಬಾರದೆಂಬ ಉದ್ದೇಶದಿಂದ ಅಪಘಾತದ ಬಗ್ಗೆ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರವಾರ ರವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಹಾಪುರ ರವರಿಗೆ ಮಾಹಿತಿ ನೀಡಲಾಗಿದೆ ಎಂದು ಹೊನ್ನಾವರ ಪೊಲೀಸರು ಮಾಹಿತಿ ನೀಡಿದ್ದಾರೆ.