ಕಾರವಾರ: ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ಹೋಗಿಬಿಟ್ಟಿದೆ. ಆಡಳಿತದಲ್ಲಿ ಹಿಡಿತ ಇರಬೇಕು. ನಾವು ಏನು ಮಾತನಾಡುತ್ತೇವೆ ಅದರಂತೆ ನಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಗೋಕರ್ಣದಲ್ಲಿ ರಾಘವೇಶ್ವರ ಭಾರತೀ ಸ್ವಾಮಿಗಳ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಸರ್ಕಾರದ ವಿರುದ್ಧ ನಾವು ಮಾತನಾಡಿದ್ರೆ ಟೀಕೆ ಅಂತಾರೆ. ಸರ್ಕಾರ ನೆರೆ ಪರಿಹಾರ ಕೊಡುತ್ತೇವೆ ಅಂತಾರೆ. ಕೆಲವುಕಡೆ ಪರಿಹಾರ ಕೊಟ್ಟಿಲ್ಲ, ಕೆಲವು ಕಡೆ ಹತ್ತುಸಾವಿರ ಕೊಟ್ಟಿದ್ದಾರೆ, ಮನೆ ಬಿದ್ದವರಿಗೆ ಐದು ಲಕ್ಷ ಕೊಡುತ್ತೇವೆ ಅಂತಾರೆ. ಎ,ಬಿ,ಸಿ ಕೆಟಗೇರಿ ಮಾಡಿದ್ದಾರೆ. ಎಲ್ಲವನ್ನೂ ಸಿ ಕೆಟಗೇರಿಗೆ ಸೇರಿಸಿಬಿಡುತ್ತಾರೆ. ಸರ್ಕಾರ ಆದೇಶ ಮಾಡಿದೆಯಾ ಅಥವಾ ಅಧಿಕಾರಿಗಳು ಬೇಜವಾಬ್ದಾರಿಯಿಂದ ಸೇರಿಸುತ್ತಾರಾ ಗೊತ್ತಿಲ್ಲ. ಆದರೇ ಇದರಿಂದ ಬಡವರಿಗೆ ತುಂಬಾ ಕಷ್ಟವಾಗಿದೆ. ಯಾರಾದ ಸತ್ತರೆ ಮಾತ್ರ ಸರಿಯಾಗಿ ಪರಿಹಾರ ಕೊಡುತ್ತಾರೆ ಅದನ್ನು ಬಿಟ್ಟರೇ ಬೆಳೆ ಪರಿಹಾರ, ಮನೆ ಪರಿಹಾರ ಪಾರದರ್ಶಕವಾಗಿ ಬರುತ್ತಿಲ್ಲ. ಅದರಲ್ಲೂ ಭ್ರಷ್ಟಾಚಾರವಿದೆ ಎಂದು ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಉಮೇಶ್ ಕತ್ತಿ ಸಾವಿಗೆ ಸಂತಾಪ ಸೂಚಿಸಿದ ಅವರು ಉಜ್ವಲ ಭವಿಷ್ಯ ಇರುವ ನಾಯಕನನ್ನು ನಾನು ಕಳೆದುಕೊಂಡಿದ್ದೇವೆ.
ಅಜಾತ ಶತ್ರು ಉಮೇಶ್ ಕತ್ತಿ, ನೇರವಾಗಿ ಮಾತನಾಡುವ ವ್ಯಕ್ತಿ. ಅವರ ಮತ್ತು ನನ್ನ ರಾಜಕೀಯ ಪಕ್ಷಗಳು ಬೇರೆ ಬೇರೆ. ಆದರೆ ನಾನು ಯಾವಾಗ ಫೋನ್ ಮಾಡಲಿ ತಕ್ಷಣ ಸ್ಪಂದಿಸುತಿದ್ದರು. ಎಲ್ಲಾ ಪಕ್ಷದೊಂದಿಗೆ ಉತ್ತಮ ಸಂಬಂದ ಇಟ್ಟುಕೊಂಡಿದ್ದರು. ಒಳ್ಳೆಯ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಿದೆ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.