ಬುರ್ಕಿನಾ ಫಾಸೊದಲ್ಲಿ ಐಇಡಿ ಸ್ಫೋಟ: 35 ಜನರ ದಾರುಣ ಸಾವು, 37 ಮಂದಿಗೆ ಗಂಭೀರ ಗಾಯ

ಪಶ್ಚಿಮ ಆಫ್ರಿಕಾ: ಬುರ್ಕಿನಾ ಫಾಸೊದಲ್ಲಿ ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನವೊಂದು ಸುಧಾರಿತ ಸ್ಪೋಟಕ ಸಾಧನಕ್ಕೆ ಡಿಕ್ಕಿ ಹೊಡೆದ ಪರಿಣಾಮ 35 ಜನರು ಮೃತಪಟ್ಟಿದ್ದು, 37 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯಪಾಲ ರೊಡಾಲ್ಫ್ ಸೊರ್ಗೊ ತಿಳಿಸಿದ್ದಾರೆ.

ಜಿಬೋ ಮತ್ತು ಬೌರ್ಜಾಂಗಾ ನಡುವೆ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಗಾಯಗೊಂಡವರ ರಕ್ಷಣೆಗೆ ಮುಂದಾಗಿದೆ. ಬೆಂಗಾವಲು ಪಡೆಯ ವಾಹನ ಉತ್ತರದಿಂದ ಬುರ್ಕಿನಾ ರಾಜಧಾನಿ ಔಗಡೌಗೌಗೆ ಹೊರಟಿತ್ತು. ಇದೇ ಪ್ರದೇಶದಲ್ಲಿ ಆಗಸ್ಟ್ ನಲ್ಲಿ ಅವಳಿ ಐಇಡಿ ಸ್ಫೋಟದಿಂದ 15 ಸೈನಿಕರು ಸಾವನ್ನಪ್ಪಿದ್ದರು.

ಜಿಹಾದಿ ಗುಂಪುಗಳು ಇತ್ತೀಚೆಗೆ ಡೋರಿ ಮತ್ತು ಜಿಬೋ ನಗರಗಳಿಗೆ ಹೋಗುವ ರಸ್ತೆಗಳ ಮೇಲೆ ಇದೇ ರೀತಿಯ ದಾಳಿಗಳನ್ನು ಮಾಡಿದ್ದವು. ಕಳೆದ 7 ವರ್ಷಗಳಿಂದ ಬುರ್ಕಿನಾ ಫಾಸೊ ಇಸ್ಲಾಂ​ ಜಿಹಾದಿಗಳ ಹಿಡಿತದಲ್ಲಿದೆ. ಇದರಿಂದಾಗಿ ಈ ರೀತಿಯ ಸ್ಫೋಟಗಳು ಅನೇಕ ಬಾರಿ ನಡೆದಿವೆ. ಇದುವರೆಗೆ 2,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 19 ಲಕ್ಷ ಜನರು ಮನೆಗಳನ್ನು ತೊರೆದಿದ್ದಾರೆ.