ಮನೆಗೆ ಸ್ಟೀಲ್ ಶೀಟ್ ಅಳವಡಿಸುವಾಗ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶ.! ಇಬ್ಬರು ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರ.!

ಬೆಳಗಾವಿ: ಹೈವೋಲ್ಟೆಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ‌. ಸುಳಗಾ ಗ್ರಾಮದ ವಿನಾಯಕ್ ಕಲ್ಕಾಂಬಕರ್ (24), ಗೋಪಾಲ್ ಅಗಸಗೇಕರ್ (52) ಮೃತ ದುರ್ದೈವಿಗಳು. ಇನ್ನು ಘಟನೆಯಲ್ಲಿ ಮತ್ತೊರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಮ್ಮ ಮನೆಯ ಮೇಲೆ ಸ್ಟಿಲ್ ಶೀಟ್ ಅಳವಡಿಸುವ ಸಂದರ್ಭದಲ್ಲಿ ಮನೆಯ ಮೇಲೆ ಹಾಯ್ದು ಹೋಗಿರುವ ಹೈವೋಲ್ಟೆಜ್ ವಿದ್ಯುತ್ ತಂತಿ ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.