ವರ್ಷಕ್ಕೊಮ್ಮೆ ದರ್ಶನ ನೀಡುವ ಸಾತೇರಿ ದೇವಸ್ಥಾನದ ಜಾತ್ರೆ ಆರಂಭ: ಸೆ. 5 ರಿಂದ ಸಾರ್ವಜನಿಕರಿಗೆ ಅವಕಾಶ

ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ತಾಲೂಕಿನ ಹಣಕೋಣದ ಪ್ರಸಿದ್ಧ ಶ್ರೀ ಸಾತೇರಿ ದೇವರ ಜಾತ್ರಾ ಮಹೋತ್ಸವವು ಸೆ. 3 ರಿಂದ ಆರಂಭವಾಗಿದ್ದು ಸೆ. 5 ರಿಂದ 5 ದಿನಗಳ ಕಾಲ ಸಾರ್ವಜನಿಕರಿಗೆ ಸೇವೆ, ದರ್ಶನಕ್ಕೆ ಅವಕಾಶ ದೊರೆಯಲಿದೆ.

ಸೆ. 3 ರ ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದಿದ್ದು, 2 ದಿನಗಳಲ್ಲಿ ಕುಳಾವಿ ಸಮುದಾಯದ ಮಾತೆಯರು, ಕುವರಿಯರಿಂದ ಅಡಿಕೆ ಹಾಗೂ ಪುರುಷರಿಂದ ತಳಯ ಸಲ್ಲಿಸಲಾಗುತ್ತದೆ. ಬಳಿಕ ಸೆ. 5-9 ರವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನ ಹಾಗೂ ಹರಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸೆ. 5 ರಂದು ಸಂಜೆ 7 ಗಂಟೆಯಿಂದ ಸದಾಶಿವಗಡದ ಓಂಕಾರ ಭಕ್ತಿ ಸಂಗೀತ ಮಂಡಳಿಯಿಂದ ಭಜನೆ, ಸೆ. 6 ರಂದು ಬೆಳಿಗ್ಗೆ 10 ರಿಂದ ಮಹಾ ಪ್ರಸಾದ ವಿತರಣೆ, ಸಂಜೆ 7 ರಿಂದ ಹಣಕೋಣದ ರಾಮದಾಸ ರಾಯ್ಕರ ಭಜನಾ ಮಂಡಳಿಯಿಂದ ಭಜನೆ, ಸೆ. 7 ರಂದು ಬೆಳಿಗ್ಗೆ 10 ಗಂಟೆಯಿಂದ ಮಹಾ ಪ್ರಸಾದ ವಿತರಣೆ, ಸಂಜೆ 7 ಗಂಟೆಯಿಂದ ಕಾಣಕೋಣ ಭಕ್ತಮಂಡಳಿಯಿಂದ ಭಜನೆ, ಸೆ.8 ರಂದು ಬೆಳಿಗ್ಗೆ 10 ಗಂಟೆಯಿಂದ ಮಹಾಪ್ರಸಾದ ವಿತರಣೆ, ಸಂಜೆ 7 ಗಂಟೆಯಿಂದ ಮಾಜಾಳಿಯ ಸಂಕಟಮೋಚನ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಇನ್ನು ಸೆ. 9 ರಂದು ಮಧ್ಯಾಹ್ನದ ವರೆಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ಬಂದ್ ಮಾಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.