‘ತೂಗುಕತ್ತಿ’ಯ ಮೇಲೆ ತೂಗುಸೇತುವೆ.! ನಿರ್ವಹಣೆ ಇಲ್ಲದೇ ಹದಗೆಟ್ಟ ಸೇತುವೆ.! ಜೀವದ ಹಂಗು ತೊರೆದು ಸಂಚರಿಸುವ ಗ್ರಾಮಸ್ಥರು.!

ಹೊನ್ನಾವರ: ಈ ತೂಗು ಸೇತುವೆಯನ್ನ ನೋಡಿದರೆ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ದುಃಸ್ಥಿತಿಯ ಹಂತ ತಲುಪಿದೆ. ಆದರೂ ಇಲ್ಲಿನ ಜನ ಪ್ರತಿನಿತ್ಯ ಇದೇ ಸೇತುವೆಯನ್ನ ಅವಲಂಬಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಆ ತೂಗು ಸೇತುವೆ ಇರುವುದಾದರೂ ಎಲ್ಲಿ.? ಆ ಸೇತುವೆಯ ಪರಿಸ್ಥಿತಿ ಹೇಗಿದೆ.? ಈ ಕುರಿತು ಬೆಳಕು ಚೆಲ್ಲುವ ಒಂದು ವಿಸ್ತೃತ ವರದಿ ಇಲ್ಲಿದೆ.

ಇರುವುದೊಂದೇ ಮಾರ್ಗ.!

ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆಯ ಇಂದಿನ ಪರಿಸ್ಥಿತಿ ಘನಘೋರವಾಗಿದೆ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾದ ಈ ತೂಗುಸೇತುವೆಯು ರಾಷ್ಟೀಯ ಹೆದ್ದಾರಿಯಿಂದ ಅನತಿ ದೂರದಲ್ಲಿದೆ. ಒಂದು ಬದಿಯಲ್ಲಿ ಕರ್ಕಿ, ಇನ್ನೊಂದು ಬದಿಯಲ್ಲಿ ಪಾವಿನಕುರ್ವೆ ಗ್ರಾಮ ನಡುವೆ ಬಡಗಣಿ ನದಿ ಹರಿಯುತ್ತದೆ. ಇವೆರಡರ ನಡುವಿನ ಸಂಪರ್ಕಕ್ಕೆ ಇರುವ ಮಾರ್ಗವೇ ಈ ಸೇತುವೆ.

ನಿರ್ವಹಣೆ ಇಲ್ಲದೇ ದುಸ್ಥಿತಿ ತಲುಪಿದ ಸೇತುವೆ.!

ಸುಂದರ ವಿಹಂಗಮ ನೋಟ ಇಲ್ಲಿದ್ದರೂ ಸಹ, ಇತ್ತೀಚಿಗಂತೂ ಈ ಸೇತುವೆಯ ದುಃಸ್ಥಿತಿ ಕಂಡು ಪ್ರತಿನಿತ್ಯ ಸಂಚರಿಸುವ ಗ್ರಾಮಸ್ಥರೇ ಭಯಪಡುವಂತಾಗಿದೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಪಾಟ್ ಆಗಿ, ಫೋಟೊಶೂಟ್ ತಾಣವಾಗಿ ಪ್ರಸಿದ್ಧಿ ಪಡೆದಿದ್ದ ಈ ಸೇತುವೆ ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ತುಂಡಾಗಿ ಬೀಳುವ ಹಂತ ತಲುಪಿದ ಕಬ್ಬಿಣದ ಪಟ್ಟಿಗಳು.!

ಸೇತುವೆಗೆ ಹಾಕಲಾಗಿರುವ ಹಲಗೆಗಳು ಹಾಳಾಗಿದ್ದು, ಸರಳುಗಳು ತುಕ್ಕು ಹಿಡಿದಿವೆ. ಸೇತುವೆಯ ಕೆಳಭಾಗದ ಆಧಾರದ ಕಬ್ಬಿಣದ ಪಟ್ಟಿಗಳು ತುಂಡಾಗಿ ಬೀಳುವ ಹಂತ ತಲುಪಿದೆ. ಪ್ರತಿದಿನ ಇಲ್ಲಿಯ ಜನ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆತಂಕದಲ್ಲಿ ಓಡಾಡುವ ಜನ.!

ಪಾವಿನಕುರ್ವಾ ಗ್ರಾಮದಲ್ಲಿ ಹೆಚ್ಚಿನವರಲ್ಲಿ ಮೀನುಗಾರರು, ಕೂಲಿಕಾರರೇ ಇದ್ದಾರೆ. ಹೀಗಾಗಿ ಸಮಯದ ಪರಿವೇ ಇಲ್ಲದೇ ತಮ್ಮ ದುಡಿಮೆಗಾಗಿ ಪಟ್ಟಣಕ್ಕೆ ಓಡಾಡುತ್ತಿರುತ್ತಾರೆ. ಹೀಗೆ ಓಡಾಟಕ್ಕೆ ಇರುವ ಏಕೈಕ ದಾರಿಯೆಂದರೆ ಈ ತೂಗು ಸೇತುವೆ. ಅಲ್ಲದೆ ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ತೂಗು ಸೇತುವೆಯನ್ನ ಬಳಸುತ್ತಾರೆ. ಸೇತುವೆ ಜೀರ್ಣಾವಸ್ಥೆ ತಲುಪಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ ಎಂದು ತಾಲೂಕು ಪಂಚಾಯತಿ ಮಾಜಿ ಸದಸ್ಯ ತುಕಾರಾಮ ನಾಯ್ಕ ಹೇಳಿದ್ದಾರೆ.

ಸದ್ಯ ಸ್ಥಳೀಯ ಪಾವಿನಕುರ್ವಾ ಗ್ರಾಮ ಪಂಚಾಯತಿ ಗ್ರಾಮಸ್ಥರ ದೂರಿನ ಮೇರೆಗೆ ತೂಗು ಸೇತುವೆಯ ಒಂದಷ್ಟು ಹಲಗೆಗಳನ್ನು ಬದಲಿಸುವ ಕಾರ್ಯವನ್ನೇನೋ ಮಾಡಿದೆ. ಆದರೆ, ಸಂಪೂರ್ಣ ಸೇತುವೆಯೇ ದುಃಸ್ಥಿತಿಯ ಹಂತ ತಲುಪಿರುವುದರಿಂದ ಸರ್ಕಾರ ಹೆಚ್ಚಿನ ಮಟ್ಟದ ದುರಸ್ತಿ ಕಾರ್ಯವನ್ನ ನಡೆಸಬೇಕಿದೆ. ಒಂದರ್ಥದಲ್ಲಿ ಸಂಪೂರ್ಣ ತೂಗು ಸೇತುವೆಯನ್ನೇ ಪುನಃ ನಿರ್ಮಿಸುವ ಅನಿವಾರ್ಯತೆ ಕೂಡ ಇಲ್ಲಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಕಣ್ಣೆತ್ತಿ ನೋಡಬೇಕಿದೆ.

– ಹೈದರ್, ಪಾವಿನಕುರ್ವಾ ಗ್ರಾಮಸ್ಥ