ಕುಮಟಾ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರಕ್ಕೆ ಒತ್ತಾಯಿಸಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಕುಮಟಾ ಶಾಸಕ ದಿನಕರ ಶೆಟ್ಟಿಯವರಿಗೆ ಮನವಿ ನೀಡಿ ಒತ್ತಾಯಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022’ ನ್ನು ಸಿದ್ದಪಡಿಸಿ ಕರ್ನಾಟಕ ಕಾನೂನು ಆಯೋಗಕ್ಕೆ ಸಲ್ಲಿಸಿದೆ. ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ನೇತೃತ್ವದ ಸಮಿತಿ ಈ ವಿಧೇಯಕಕ್ಕೆ ಅವಶ್ಯವಿರುವ ಕಾನೂನುಗಳೊಂದಿಗೆ ಸಿದ್ದಪಡಿಸಿ ವಿಧೇಯಕದ ಕರಡನ್ನು ಕಾನೂನು ಸಚಿವರಿಗೆ ಸಲ್ಲಿಸಿದ್ದಾರೆ. ಅದನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಿದ ಸಂದರ್ಭದಲ್ಲಿ, ಸದನದ ಸದಸ್ಯರೆಲ್ಲರೂ ಸರ್ವಾನುಮತದಿಂದ ಸಮ್ಮತಿಸಿ, ವಿಧೇಯಕವನ್ನು ಜಾರಿಗೆ ತರುವಂತೆ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.
ಈ ವಿಧೇಯಕ ಜಾರಿಯಾದರೆ ಭಾಷಾ ಸಮನ್ವಯತೆಗೆ ಸಹಕಾರಿಯಾಗಲಿದೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ವಿಧೇಯಕವನ್ನು ಬೆಂಬಲಿಸುತ್ತಿದೆ. ಜೊತೆಗೆ ಅಧಿವೇಶನದಲ್ಲಿ ಅಂಗೀಕರಿಸುವಂತೆ ಒತ್ತಾಯಿಸುತ್ತಿದೆ ಎಂದು ಬಿ.ಎನ್. ವಾಸರೆ ತಿಳಿಸಿದರು. ತಾವೂ ಕೂಡಾ ಸದನದಲ್ಲಿ ಈ ವಿಧೇಯಕ ಅಂಗೀಕಾರಕ್ಕೆ ಸಹಮತ ವ್ಯಕ್ತಪಡಿಸುವಂತೆ ಶಾಸಕ ದಿನಕರ ಶೆಟ್ಟಿಯವರಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಸಹಮತ ವ್ಯಕ್ತ ಪಡಿಸಿದ ಶಾಸಕ ದಿನಕರ ಶೆಟ್ಟಿಯವರು ಈ ವಿಧೇಯಕದ ಕರಡು ಪ್ರತಿಯನ್ನು ಪರಶೀಲಿಸಿ ಸದನದಲ್ಲಿ ಬೆಂಬಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕಸಾಪ ಕುಮಟಾ ಘಟಕದ ಗೌರವ ಕಾರ್ಯದರ್ಶಿ ಪ್ರೊ.ಪ್ರಮೋದ ನಾಯ್ಕ ಉಪಸ್ಥಿತರಿದ್ದರು.