ಬೇಡ್ಕಣಿಯ ಕೃಷ್ಣಾ ನಾಯ್ಕ್ ಗೆ ‘ಯಕ್ಷಸಿರಿ ಪ್ರಶಸ್ತಿ’

ಸಿದ್ದಾಪುರ: ಕಳೆದ 30 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಿರುವ ಸಿದ್ದಾಪುರದ ಬೇಡ್ಕಣಿಯ ಕೃಷ್ಣಾ ನಾಯ್ಕ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನೀಡುವ ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಲತಃ ತಾಲೂಕಿನ ಬೇಡ್ಕಣಿಯವರಾದ ಕೃಷ್ಣಾಜಿ ಪ್ರಸ್ತುತ 16 ನೇ ಮೈಲಿಕಲ್ ಬಳಿಯ ಮಾವಿನಕೊಪ್ಪದಲ್ಲಿ ನೆಲೆಸಿದ್ದಾರೆ. ಕಳೆದ ಮೂರು ದಶಕಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಅವರು ಯಾವುದೇ ಪಾತ್ರವಾದರೂ ಅಭಿನಯಿಸಲು ಸೈ ಎನ್ನುತ್ತಿದ್ದರು. ರಾಜ್ಯದ ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ಮೇಳದಲ್ಲಿ ಮುಖ್ಯ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದರು. ಪ್ರಮುಖ ಪಾತ್ರಗಳಾದ ಕೌರವ, ಅರ್ಜುನ, ಶಲ್ಯ, ಆಂಜನೇಯ, ಬಲರಾಮನ ವೇಷ ಧರಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಕೃಷ್ಣಾಜಿ ನೀಡಿರುವ ಕೊಡುಗೆಯನ್ನು‌ ಪರಿಗಣಿಸಿ 2022 ನೇ ಸಾಲಿನ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.