ಭಟ್ಕಳ: ಗಣೇಶ ಹಬ್ಬಕ್ಕೆ ಒಂದು ದಿನ ಬಾಕಿ ಇದ್ದು ಎಲ್ಲೆಡೆ ಗಣಪತಿ ಮೂರ್ತಿ ತಯಾರಿಕೆ ಭರದಿಂದ ಸಾಗುತ್ತಿದೆ. ಭಟ್ಕಳದಲ್ಲಿ ಕಂಚುಗಾರ ಕುಟುಂಬದವರಾದ ಶ್ರೀಪಾದ ಕಂಚುಗಾರ ಹಾಗೂ ಗೋಪಾಲ ಕೃಷ್ಣ ಕಂಚುಗಾರ ಹಲಾವಾರು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿಕೊಂಡು ಬಂದಿದ್ದಾರೆ.
ಈ ಬಾರಿಯ ಗಣೇಶ ಚತುರ್ಥಿಯ ಪ್ರಯುಕ್ತ ಪಾರಂಪರಿಕವಾಗಿ ಮೂರ್ತಿಯನ್ನು ತಯಾರಿಸಿದ್ದು ಪ್ರಮುಖ ಆಕರ್ಷಣೆಯಾಗಿದೆ. ಗಣೇಶೋತ್ಸವಕ್ಕೆ ಎರಡು ತಿಂಗಳುಗಳು ಮೊದಲೇ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗುವ ಇವರು ವಿವಿಧ ರೀತಿಯ ಮೂರ್ತಿಯನ್ನು ತಯಾರಿಸುತ್ತಾರೆ.
ಸರ್ಕಾರದ ಸುತ್ತೋಲೆಗೆ ಅನುಸಾರವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸುತ್ತಾರೆ. ಶಿರಸಿಯಿಂದ ಜೇಡಿ ಮಣ್ಣನ್ನು ತಂದು ಮೂರ್ತಿ ರಚನೆಗೆ ಯೋಗ್ಯವಾದ ರೀತಿಯಲ್ಲಿ ಹದ ಮಾಡಿ ನೂರಕ್ಕೂ ಅಧಿಕ ಗಣೇಶನ ಮೂರ್ತಿಯನ್ನು ಮಾಡುತ್ತಾರೆ. ಅಲ್ಲದೇ ನೀರಿನಲ್ಲಿ ಸುಲಭವಾಗಿ ಕರಗುವಂತಹ, ಅರೋಗ್ಯಕ್ಕೆ ಯಾವುದೇ ರೀತಿಯ ದುಷ್ಪರಿಣಾಮವಿಲ್ಲದ ಪರಿಸರ ಸ್ನೇಹಿ ಬಣ್ಣವನ್ನು ಬಳಸುವುದು ವಿಶೇಷವಾಗಿದೆ.
ಇವರು ತಯಾರಿಸುವ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಭಾರೀ ಬೇಡಿಕೆ ಇದ್ದು, ಸುತ್ತಮುತ್ತಲಿನ ಜನರು ಮೂರ್ತಿಯನ್ನು ಖರೀದಿಸಿ ವಿಘ್ನನಿವಾರಕ ಗಣೇಶನಿಗೆ ಸಂಭ್ರಮದಿಂದ ಪೂಜೆಯನ್ನು ನೆರವೇರಿಸುತ್ತಾರೆ.