ಏರಿಕೆಯಾದ ಅಡಿಕೆ ದರ.! ರೈತರ ಮೊಗದಲ್ಲಿ ಸಂತಸ.!

ಸಿದ್ದಾಪುರ: ಘಟ್ಟದ ಮೇಲಿನ ತಾಲೂಕುಗಳ ವಾಣಿಜ್ಯ ಬೆಳೆಯಾದ ಅಡಿಕೆ ದರ ಕಳೆದೆರಡು ವಾರಗಳಿಂದ ಏರಿಕೆ ಕಂಡಿದ್ದು, ರೈತರಿಗಿಂತ ವ್ಯಾಪಾರಸ್ಥರ ಮೊಗದಲ್ಲಿ ಹೆಚ್ಚು ಸಂತಸ ತಂದಿದೆ.

ಕಳೆದ ಹದಿನೈದು ದಿನಗಳಿಂದ ಚಾಲಿ ಅಡಿಕೆಯ ದರ ನಾಲ್ಕರಿಂದ ಐದು ಸಾವಿರಕ್ಕೆ ಏರಿಕೆಯಾಗಿದೆ. ಹೆಚ್ಚಿನ ರೈತರ ಅಡಿಕೆ ಈಗಾಗಲೇ ಮಾರಾಟವಾಗಿದ್ದು, ವ್ಯಾಪಾರಸ್ಥರ ಅಡಿಕೆ ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಬರುತ್ತಿದೆ. ರೈತಾಪಿ ಸಮುದಾಯ ಗದ್ದೆ ನಾಟಿ ಹಾಗೂ ಮದ್ದು ಹೊಡೆಯುವ ಕೆಲಸ ಬ್ಯುಸಿಯಾಗಿರುವುದರಿಂದ ಕೆಲವರಿಗೆ ಅಡಿಕೆ ರೆಡಿ ಮಾಡಿ ಮಾರುಕಟ್ಟೆಗೆ ಹಾಕಲು ಸಮಯ ಸಿಗುತ್ತಿಲ್ಲ.

ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿಯ ದರ ತೇಜಿಯಾಗಿದೆ. ಹದಿನೈದು ದಿನಗಳ ಹಿಂದೆ 38 ರಿಂದ 39 ಸಾವಿರ ದರವಿದ್ದ ಚಾಲಿಗೆ, ಪ್ರಸ್ತುತ 43 ರಿಂದ 45 ಸಾವಿರಕ್ಕೆ ಏರಿಕೆಯಾಗಿದೆ. ಕೆಂಪಡಕೆಗೆ 48-49 ಸಾವಿರವಿದ್ದ ಬೆಲೆ, ಹಾಲಿ 50-51 ಸಾವಿರಕ್ಕೆ ಏರಿಕೆಯಾಗಿದೆ‌. ರೈತರ ಬಳಿ ಕೆಂಪಡಿಕೆಗಿಂತ ಚಾಲಿಯ ಪ್ರಮಾಣವೇ ಹೆಚ್ಚಿದ್ದು, ಈ ರೇಟ್ ಎಷ್ಟು ದಿನಗಳವರೆಗೆ ಇರುತ್ತದೆ ಎಂಬುದು ಮಾತ್ರ ನಿಗೂಢವಾಗಿದೆ.

ಜಿಲ್ಲೆಯ ಸಿದ್ದಾಪುರ, ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಪ್ರಮುಖ ಅಡಕೆ ವಹಿವಾಟು ಸಂಸ್ಥೆಗಳಾದ ಟಿ ಎಸ್ ಎಸ್ ಹಾಗೂ ಟಿಎಂಎಸ್ ಅಂಗಳದಲ್ಲಿ ಸಾವಿರಾರು ಕ್ವಿಂಟಲ್ ಅಡಿಕೆ ವ್ಯಾಪಾರವಾಗುತ್ತಿದೆ. ಶ್ರಾವಣ ಮಾಸದ ವೇಳೆ ಅಡಿಕೆ ದರ ಪ್ರತಿ ವರ್ಷ ಏರಿಕೆ ಕಾಣುವುದು ವಾಡಿಕೆ‌. ಪ್ರಸಕ್ತ ಸಾಲಿನಲ್ಲೂ ಚಾಲಿ ಅಡಿಕೆಗೆ ಬಂಪರ್ ಬೆಲೆ ಬಂದಿದೆಯಾದರೂ ಬಹುತೇಕ ರೈತರ ಬಳಿ ಅಡಿಕೆ ಖಾಲಿಯಾಗಿದೆ. ವ್ಯಾಪಾರಸ್ಥರಿಗೆ ಒಳ್ಳೆ ಲಾಭ ಸಿಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟಿ.ಎಸ್.ಎಸ್ ಸಂಸ್ಥೆಯೊಂದರಲ್ಲೇ ಲಕ್ಷಕ್ಕೂ ಅಧಿಕ ಕ್ವಿಂಟಲ್ ಅಡಕೆ ಪ್ರತಿ ವರ್ಷ ವಹಿವಾಟು ನಡೆಯುತ್ತಿದೆ. ಸಿದ್ದಾಪುರದಂತಹ ಸಣ್ಣ ತಾಲೂಕಿನಲ್ಲೇ ಇಲ್ಲಿಯ ಟಿಎಂಎಸ್ ಮೂಲಕ ವರ್ಷಕ್ಕೆ 45-50 ಸಾವಿರ ಕ್ವಿಂಟಲ್ ಅಡಿಕೆ ವ್ಯಾಪಾರವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅಡಿಕೆಯ ಉತ್ಪನ್ನದಲ್ಲಿ ಹೆಚ್ಚಳ ಕಂಡು ಬಂದರೂ ಸಹ, ದರ ಸ್ಥಿರವಾಗಿರುವುದು ಬೆಳೆಗಾರರು ನಿಶ್ಚಿಂತರಾಗಿರುವಂತೆ ಮಾಡಿದೆ.