240 ಕಿ.ಮೀ ಯಶಸ್ವಿ ಸೈಕ್ಲಿಂಗ್ ಯಾತ್ರೆ: ಸಾಮಾಜಿಕ ಕಳಕಳಿ ಮೂಡಿಸಲು ವಿಶೇಷ ಅಭಿಯಾನ

ಕಾರವಾರ: ಕಾರವಾರ ಬೈಸಿಕಲ್ ಕ್ಲಬ್ (KBC) ನ ಸದಸ್ಯರು ಕಾರವಾರದಿಂದ ಭಟ್ಕಳದ ಮುರುಡೇಶ್ವರದವರೆಗೆ ಒಟ್ಟು 240 ಕಿ.ಮೀ. ಸೈಕ್ಲಿಂಗ್ ಮಾಡಿ ವಾಪಸ್ಸಾಗುವ ಮೂಲಕ ನೂತನ ಸಾಧನೆಗೆ ಕಾರಣರಾಗಿದ್ದಾರೆ.

ಆ. 21 ರಂದು ಆಯೋಜಿಸಿದ್ದ ಸೈಕ್ಲಿಂಗ್ ಅಲ್ಲಿ 22 ಮಂದಿ ಕ್ಲಬ್ ನ ಸದಸ್ಯರು ಪಾಲ್ಗೊಂಡಿದ್ದರು. ಬೆಳಿಗ್ಗೆ 4 ಕ್ಕೆ ಕಾರವಾರದ ಸೇಂಟ್ ಮೈಕೆಲ್ ವೃತ್ತದಿಂದ ಹೊರಟಿದ್ದ ಈ ಸೈಕ್ಲಿಂಗ್ ತಂಡ, 11 ಗಂಟೆಯ ಸುಮಾರಿಗೆ 120 ಕಿ.ಮೀ. ದೂರವನ್ನ ಕ್ರಮಿಸಿ ಮುರುಡೇಶ್ವರಕ್ಕೆ ಯಶಸ್ವಿಯಾಗಿ ತಲುಪಿತು. ದೇವರ ದರ್ಶನ ಮಾಡಿ, ವಿಶ್ರಾಂತಿ ಪಡೆದ ಬಳಿಕ ಸುಮಾರು 12 ಗಂಟೆಗೆ ಕಾರವಾರದತ್ತ ಪ್ರಯಾಣಿಸಿ, ರಾತ್ರಿ 8.30ಕ್ಕೆ ಕಾರವಾರದ ‘ಐ ಲವ್ ಕಾರವಾರ’ ಸೆಲ್ಫಿ ಪಾಯಿಂಟ್ ಬಳಿ ಮುಕ್ತಾಯಗೊಳಿಸಿದರು.

ಕುಟುಂಬಸ್ಥರಿಂದ ಸಂಭ್ರಮದ ಸ್ವಾಗತ

ಕ್ಲಬ್ ನ ಎಲ್ಲಾ 22 ಸದಸ್ಯರು ಕೂಡ ಅನಾಯಾಸವಾಗಿ 240 ಕಿ.ಮೀ. ಸೈಕ್ಲಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಕ್ತಾಯ ಸ್ಥಳವಾದ ಕಾರವಾರದ ‘ಐ ಲವ್ ಮೈ ಕಾರವಾರ’ ಸೆಲ್ಫಿ ಪಾಯಿಂಟ್ ಬಳಿ ಸೈಕ್ಲಿಂಗ್ ಪಟುಗಳ ಕುಟುಂಬಸ್ಥರು ಸಂತಸದಿಂದ ತಂಡವನ್ನ ಬರಮಾಡಿಕೊಂಡರು. ಈ ವೇಳೆ ಕೇಕ್ ಕತ್ತರಿಸಿ ಯಶಸ್ವಿ ಸೈಕ್ಲಿಂಗ್ ಅನ್ನು ಸಂಭ್ರಮದಿಂದ ಮುಕ್ತಾಯಗೊಳಿಸಿದರು.

ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ ತಂಡ

ಕಾರವಾರ ಬೈಸಿಕಲ್ ಕ್ಲಬ್ ಈ ಸೈಕ್ಲಿಂಗ್ ಗೆ ಬೆನ್ನೆಲುಬಾಗಿ ನಿಂತಿದ್ದ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರ ಯಾವತ್ತೂ ಸಹಕಾರದಿಂದಾಗಿ ಯಶಸ್ವಿಯಾಗಿ ತನ್ನ ಗುರಿಗಳನ್ನ ಸಾಧಿಸಲು ಕಾರಣವಾಗಿದೆ ಎಂದು ಕ್ಲಬ್ ನ ಮುಖ್ಯಸ್ಥರು ತಿಳಿಸಿದ್ದಾರೆ.

ಸಾಮಾಜಿಕ ಕಳಕಳಿಗೆ ಸೈಕ್ಲಿಂಗ್

ಕಾರವಾರ ಬೈಸಿಕಲ್ ಕ್ಲಬ್ ಸಾಮಾನ್ಯವಾಗಿ ಪ್ರತಿ ವಾರವೂ ಹೆಲ್ತ್- ಫನ್- ಫಿಟ್ನೆಸ್ ಎಂಬ ಉದ್ದೇಶದಿಂದ ಸೈಕ್ಲಿಂಗ್ ಆಯೋಜಿಸುತ್ತದೆ. ಆದರೆ ಈ ಬಾರಿ ಕೇಂದ್ರ ಸರ್ಕಾರದ ಸ್ವಚ್ಛ- ಸ್ವಸ್ಥ ಭಾರತ ಹಾಗೂ ಥೂಕ್ ಮತ್ ಕಾರವಾರ- ಥೂಕ್ ಮತ್ ಇಂಡಿಯಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಸೈಕ್ಲಿಂಗ್ ನಡೆಸಿದ್ದರು.

ಈ ಸೈಕ್ಲಿಂಗ್ ತಂಡದ ಜೊತೆ ಎರಡು ರಕ್ಷಣಾ ವಾಹನ, ಓರ್ವ ಮೆಕಾನಿಕ್ ಹಾಗೂ ಈರ್ವರು ಸಹಾಯಕ ಸಿಬ್ಬಂದಿ ಇದ್ದರು. ಮಳೆ- ಬಿಸಿಲಿನ ಪ್ರತಿಕೂಲ ವಾತಾವರಣದಲ್ಲೂ ತಂಡ ಒಟ್ಟಾರೆ 240 ಕಿ.ಮೀ. ಪ್ರಯಾಣವನ್ನ ಯಶಸ್ವಿಯಾಗಿ ಪೂರೈಸಿತು.