ಸಿದ್ದಾಪುರ: ತಾಲೂಕಿನ ಅಡಿಕೆ ವಹಿವಾಟಿನ ಹೆಮ್ಮೆಯ ಸಹಕಾರಿ ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿ.ಎಂ.ಎಸ್) 2021-22 ನೇ ಸಾಲಿನಲ್ಲಿ 5.88 ಕೋಟಿ ನಿಕ್ಕಿ ಲಾಭ ಗಳಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಕಳೆದ 75 ವರ್ಷಗಳಿಂದ ಅನೇಕ ಏಳು ಬೀಳುಗಳನ್ನು ಎದುರಿಸಿ ಸದಸ್ಯರ ನಿಷ್ಠೆ ಹಾಗೂ ಶ್ರದ್ಧೆಯ ವ್ಯವಹಾರದಿಂದ ಇಂದು ಹೆಮ್ಮರವಾಗಿ ಬೆಳೆದಿದೆ. 2021-22 ನೇ ಸಾಲಿನಲ್ಲಿ 7.79 ಕೋಟಿ ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ನಿಧಿಗಳನ್ನು ತೆಗೆದಿರಿಸಿದ ನಂತರ 5.88 ಕೋಟಿ ನಿಕ್ಕಿ ಲಾಭ ಗಳಿಸಿದೆ.
ಪ್ರಸ್ತುತ ಸಂಘದಲ್ಲಿ 3,544 ಶೇರುದಾರ ಸದಸ್ಯರಿದ್ದು, 3.24 ಕೋಟಿ ಶೇರು ಬಂಡವಾಳ ಹೊಂದಿದೆ. 3,900 ನಾಮಮಾತ್ರ ಸದಸ್ಯರಿಂದ 21-22 ನೇ ಸಾಲಿನಲ್ಲಿ 197 ಕೋಟಿ ವಹಿವಾಟು ನಡೆಸಲಾಗಿದೆ. ಸಂಚಿತ ನಿಧಿಗಳ ಮೊತ್ತ 43.48 ಕೋಟಿಯಷ್ಟಿದೆ. 89.32 ಕೋಟಿ ಠೇವಣಿಗಳನ್ನು ಸಂಗ್ರಹಿಸಿದ್ದು, 200 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ತಾಲೂಕಿನ ಕಾನಸೂರಿನಲ್ಲಿ 1 ಕೋಟಿ ವೆಚ್ಚದಲ್ಲಿ ವ್ಯಾಪಾರಿ ಅಂಗಳ ನಿರ್ಮಿಸಲಾಗಿದೆ. ಜೊತೆಗೆ ರೈತರ ಭತ್ತ ಸಂಗ್ರಹಕ್ಕಾಗಿ ವ್ಯವಸ್ಥಿತವಾದ ಗೋದಾಮು ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಿ ಬಳಕೆಗೆ ನೀಡಲಾಗುವುದು ಎಂದರು.