ಜೋಯಿಡಾ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುವರ್ಣ ಸಂಭ್ರಮವನ್ನು ಆಚರಣೆ ಮಾಡಿದ್ದೇವೆ. ಆದರೆ ಇಂದಿಗೂ ತಾಲೂಕಿನ ಹಲವಾರು ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಕರಾಳ ಕತ್ತಲೆಯಲ್ಲಿದೆ. ನೂರಾರು ಕೋಟಿ ಅನುದಾನ ಇಲ್ಲಿನ ಅಭಿವೃದ್ದಿಯ ಹೆಸರಿನಲ್ಲಿ ಖರ್ಚಾದರೂ ಗ್ರಾಮಗಳಿಗೆ ಮೂಲ ಸೌಕರ್ಯ ಮಾತ್ರ ಮರಿಚೀಕೆಯಾಗಿದೆ.
ಶಿಂಗರಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ಪುಟ್ಟ ಡುಮಕರವಾಡಿ ಗ್ರಾಮವು ಇಂದಿಗೂ ನಾನಾ ಸಮಸ್ಯೆಗಳಿಂದ ಅಭಿವೃದ್ಧಿಯಾಗದೇ ಹಾಗೇ ಉಳಿದಿದೆ. ಸುಮಾರು 10 ಕುಟುಂಬಗಳಿರುವ ಪುಟ್ಟ ಊರು ಇದಾಗಿದ್ದು, ಮೂಲ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ವಿದ್ಯುತ್ ಇಂದಿಗೂ ಸಮರ್ಪಕವಾಗಿಲ್ಲ.
ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮ
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳಿವೆ, ಒಂದು ವೈಜಗಾಂವನಿಂದ ಮತ್ತು ಇನ್ನೊಂದು ಮಾಲಂಬಾದಿಂದ. ಈ ಎರಡೂ ರಸ್ತೆಗಳು ಕಚ್ಚಾ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಇಲ್ಲಿನ ನದಿ ತುಂಬಿ ಹರಿಯುವುದರಿಂದ ಐದು ತಿಂಗಳುಗಳ ಕಾಲ ಈ ಊರು ದ್ವೀಪದಂತಾಗುತ್ತದೆ. ಆದ್ದರಿಂದ ಈ ಗ್ರಾಮದ ನಿವಾಸಿಗಳು ಮಾರುಕಟ್ಟೆಗಾಗಿ ದಾಂಡೇಲಿ ನಗರ, ತಾಲೂಕಾ ಕೇಂದ್ರವಾದ ಜೊಯಿಡಾ, ಗ್ರಾಮ ಪಂಚಾಯತ ಶಿಂಗರಗಾಂವ, ಆರೋಗ್ಯ ಕೇಂದ್ರ ಮತ್ತು ಶಾಲೆಗೆ ತೆರಳುವುದು ಕಷ್ಟಕರವಾಗಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅತಿ ತುರ್ತು ಸಂದರ್ಭದಲ್ಲಿ ಕಂಬಳಿಯ ಮೂಲಕ ಕಾಲು ಸಂಕದ ಮೇಲೆ ದಾಟಬೇಕಾದ ಸ್ಥಿತಿ ಇದೆ.
ತುಂಬಿ ಹರಿವ ಹಳ್ಳ
ಮಾಲಂಬಾದಿಂದ ಡುಮಕರವಾಡಿ ಸುಮಾರು 3 ಕಿ.ಮೀ. ಹಾಗೂ ವೈಜಗಾಂವನಿಂದ ಡುಮಕರವಾಡಿಗೆ ತಲುಪಲು 6 ಕಿಮೀ ದೂರವಿದ್ದು, ಈ ಮಾರ್ಗ ಮಧ್ಯದಲ್ಲಿ ದೊಡ್ಡ ನದಿ ಇದೆ. ಅದು ಮುಂದೆ ಕಾಳಿ ನದಿಯನ್ನು ಸೇರುತ್ತದೆ. ಈ ನದಿಗೆ ಸೇತುವೆ ಇಲ್ಲದ ಕಾರಣ ಕಾಡಿನ ಮೂಲಕ ತಮ್ಮ ಮನೆಗಳಿಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಈ ಗ್ರಾಮದವರಿಗೆ ಎದುರಾಗಿದೆ.
ದುಮಕರವಾಡಿಗೆ ರಸ್ತೆ, ಸೇತುವೆ ಇಲ್ಲದ ಕಾರಣ ಜನರು ಮಳೆಗಾಲದಲ್ಲಿ ಹಲವಾರು ಸಂಕಷ್ಟ ಎದುರಿಸುತ್ತಿದ್ದಾರೆ. ಮಾಲಂಬಾದಿಂದ ದುಮಕರವಾಡಿವರೆಗೆ ಇದೀಗ ಜೆಲ್ಲಿ ರಸ್ತೆ ಮತ್ತು ಒಂದು ಸೇತುವೆ ಮಾಡಲಾಗಿದ್ದರೂ ನದಿಗೆ ಇನ್ನೂ ಎರಡು ಸ್ಥಳಗಳಲ್ಲಿ ಸೇತುವೆ ನಿರ್ಮಿಸದೆ ಇರುವ ಕಾರಣ ವಾಹನ ಸಂಚಾರ ಕಷ್ಟ. ಸರಕಾರ ಆದಷ್ಟು ಬೇಗ ಇಲ್ಲಿನ ಜನರಿಗೆ ಈ ಸೌಕರ್ಯವನ್ನು ಮಾಡಿಕೊಡಬೇಕು.
– ಮಹೇಶ ಗಾವಡೆ, ಗ್ರಾಮ ಪಂಚಾಯತ ಸದಸ್ಯ
ಮಾಲಂಬಾ ಮತ್ತು ಡುಮಕರವಾಡಿಗೆ ಸಂಪರ್ಕಿಸುವ ರಸ್ತೆಯ ಕಾಮಗಾರಿ 2021-22 ನೇ ಸಾಲಿನ ಪ್ರಕೃತಿ ವಿಕೋಪ ಅನುದಾನದಿಂದ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಯನ್ನು ಅಂಕೋಲಾದ ಗುತ್ತಿಗೆದಾರ ವಿಕಾಸ ಜಿ ಶೆಟ್ಟಿ ಮಾಡಿದ್ದಾರೆ. ಈ ಕಾಮಗಾರಿ 2 ಕಿ.ಮೀ ಕಡಿರಸ್ತೆ ಮತ್ತು ಒಂದು ಸೇತುವೆಯನ್ನು ಒಳಗೊಂಡಿದೆ. ಈ ಸೇತುವೆಯ ಕಾಮಗಾರಿಯು 20 ಮೇ 2022 ರಂದು ಪೂರ್ಣಗೊಂಡಿದ್ದು, ಕಾಮಗಾರಿ ಮಾಡಿದ ಎರಡುವರೆ ತಿಂಗಳಿನಲ್ಲಿಯೇ ಒಂದು ಕಡೆ ಕಟ್ಟಿರುವ ಪಿಚ್ಚಿಂಗ್ ಕುಸಿದಿದ್ದು, ಸರಿಪಡಿಸಲಾಗಿದೆ.
– ಎಮ್.ಪಿ ಮಂಜುನಾಥ, ಜಿ.ಪಂ ಇಂಜಿನಿಯರ್