ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯ್ಕ್

ಕಾರವಾರ: ತಾಲ್ಲೂಕಿನ ಮಲ್ಲಾಪುರದಲ್ಲಿ ನಡೆದ ಕೆರವಡಿ ವಲಯಮಟ್ಟದ ಶಾಲಾ ಮಕ್ಕಳ ಕ್ರೀಡಾ ಕೂಟಕ್ಕೆ ಬುಧವಾರ ಶಾಸಕಿ ರೂಪಾಲಿ ಎಸ್. ನಾಯ್ಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಶಾಲಾ ಮಟ್ಟದಲ್ಲಿ ನಡೆಸುತ್ತಿರುವ ಕ್ರೀಡಾಕೂಟಕ್ಕೆ ಎರಡು ವರ್ಷಗಳ ಬಳಿಕ ಅವಕಾಶ ದೊರೆತಿದೆ. ಮೊದಲು ಪ್ರವಾಹ, ನಂತರ ಕೋವಿಡ್‌ ನಿಂದ ಯಾವುದೇ ಕ್ರೀಡಾಕೂಟ ನಡೆಸಲು ಸಾಧ್ಯವಾಗಿರಲಿಲ್ಲ. ಕೋವಿಡ್‌ ನಿಂದಾಗಿ ಮನೆಯ ಹೊರಗೆ ಬರಲು ಸಾಧ್ಯವಾಗಿಲ್ಲ. ಎಲ್ಲರೂ ಈ ಸಮಸ್ಯೆಯನ್ನು ಅನುಭವಿಸಿದ್ದಾರೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಪೆಟ್ಟು ಬಿದ್ದಂತಾಗಿತ್ತು. ಕೇವಲ ಕ್ರೀಡೆಯನ್ನಷ್ಟೇ ಅಲ್ಲದೇ ವಿದ್ಯಾಭ್ಯಾಸದ ಕುರಿತು ಗಮನ ಹರಿಸಬೇಕು. ಈಗಾಗಲೇ ನಮ್ಮ ದೇಶದ ಕ್ರೀಡಾಪಟುಗಳು ಹಲವು ರೀತಿಯ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳು ಕೂಡ ಉತ್ತಮ ಕ್ರೀಡಾಪಟುಗಳಾಗಲಿ ಎಂದು ಹಾರೈಸಿದರು.

ಮಕ್ಕಳು ಕ್ರೀಡೆಯ ಜತೆಗೆ ಶಾಲೆಯಲ್ಲಿ ಹೇಳಕೊಡುವ ಪಾಠಗಳನ್ನು ಅಭ್ಯಾಸ ಮಾಡಬೇಕು. ಮಕ್ಕಳು ಗುರು ಹಿರಿಯರಿಗೆ ಗೌರವ ಕೊಡಬೇಕು. ವಿನಯವನ್ನು ಅಳವಡಿಸಿಕೊಂಡರೆ ಸರಸ್ವತಿಯನ್ನು ಒಲಿಸಿಕೊಳ್ಳಲು‌ ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಗೆಲುವು ಒಂದೇ ಮುಖ್ಯವಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು, ಕ್ರೀಡಾಪಟುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.