ಸಿದ್ದಾಪುರ: ಮೌಲ್ಯಾಧಾರಿತ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ 97 ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ಎಂಜಿಸಿ ಕಾಲೇಜಿನ ಸಭಾಭವನದಲ್ಲಿ ಸೋಮವಾರ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಂಗೂರ ನಗರ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಆರ್.ಜಿ.ಹೆಗಡೆ ಮಾತನಾಡಿ, ರಾಮಕೃಷ್ಣ ಹೆಗಡೆ ಯಾವುದೇ ರೀತಿಯ ಆಡಂಬರಕ್ಕೆ ಮಹತ್ವ ಕೊಡುತ್ತಿರಲಿಲ್ಲ. ಮಹಾನ್ ದೂರದೃಷ್ಟಿಯ ರಾಜಕಾರಣಿಯಾಗಿದ್ದರು. ಹೆಗಡೆಯವರು ಜಾರಿಗೆ ತಂದಿದ್ದ ಯೋಜನೆ ಹಾಗೂ ಕಾರ್ಯಕ್ರಮಗಳು ಇಂದಿಗೆ ತುಂಬಾ ಪ್ರಸ್ತುತವಾಗಿದೆ ಎಂದರು.
ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ ಮಾತನಾಡಿ, ದೇಶದ ಪ್ರತಿಯೊಬ್ಬರು ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕು. ವೈವಿದ್ಯಮಯವಾದ ದೇಶದ ಎಲ್ಲ ಜನರನ್ನು ಒಟ್ಟಿಗೆ ಕೊಂಡೊಯುತ್ತಿರುವ ಭಾರತದ ಸಂವಿಧಾನದ ಆಶಯಗಳನ್ನು ಇಡೇರಿಸಬೇಕು ಎಂದರು.
ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತತ್ತೆಯನ್ನು ರಾಮಕೃಷ್ಣ ಹೆಗಡೆಯವರಷ್ಟು ಪ್ರತಿಪಾದಿಸಿದವರು ಮತ್ತಾರು ಇಲ್ಲ. ಕೇಂದ್ರದ ಅಧಿಕಾರವನ್ನು ರಾಜ್ಯಕ್ಕೆ ಹಾಗೂ ರಾಜ್ಯದ ಅಧಿಕಾರವನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡುವುದರಲ್ಲಿ ಹೆಗಡೆಯವರ ವಿಕೇಂದ್ರಿಕರಣ ವ್ಯವಸ್ಥೆ ಮೂಲ ಕಾರಣ. ಹೆಗಡೆಯವರು ಪ್ರತಿಪಾದಿಸಿದ ಒಕ್ಕೂಟ ವ್ಯವಸ್ಥೆ ಇಂದಿನ ದಿನಗಳಲ್ಲಿ ತುಂಬಾ ಪ್ರಸ್ತುತವಾಗಿದೆ ಎಂದ ಅವರು ಹೆಗಡೆಯವರು ಹಾಕಿ ಕೊಟ್ಟ ದಾರಿಯಲ್ಲಿ ಮುನ್ನಡೆಯೋಣ ಎಂದರು.