ಕಾರವಾರ: ನಗರದ ಹಿಂದೂ ಪ್ರೌಢಶಾಲೆ ಸಭಾಭವನದಲ್ಲಿಸೋಮವಾರ ಕೊಂಕಣಿ ಭಾಷಾ ಅಭಿಮಾನಿ ಕಾರವಾರ ಇವರ ವತಿಯಿಂದ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸದಾಶಿವಗಡದ ಚರ್ಚ್ ಫಾದರ್ ಪಿಂಟೊ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಸುನಿಲ ನಾಯ್ಕ ಮಾತನಾಡಿ, ಕಾರವಾರ ನಗರ ಸಭೆಯು ನಗರದ ಪ್ರಮುಖ ರಸ್ತೆಗಳ, ಬಡಾವಣೆಗಳ ಹೆಸರನ್ನು ದೇವನಾಗರಿಯ ಲಿಪಿಯ ಮೂಲಕ ಕೊಂಕಣಿಯಲ್ಲಿ ಬರೆಯಲಾಗಿತ್ತು. ಆದರೆ ಈ ಬಗ್ಗೆ ಕನ್ನಡ ಸಂಘಟನೆಗಳ ವಿರೋಧದ ಬಳಿಕ ನಗರಸಭೆ ಅಳಿಸಿ ಹಾಕಿದೆ. ಅದಾದ ಬಳಿಕ ಕೊಂಕಣಿ ಭಾಷಿಕರ ಮನವಿಯ ಮೇರೆಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೊಂಕಣಿ ಭಾಷಿಕರು ಹೆಚ್ಚಿರುವುದರಿಂದ ಕೊಂಕಣಿಯಲ್ಲಿಯೂ ಬರೆಸುವ ಬಗ್ಗೆ ಠರಾವು ಪಾಸು ಮಾಡಲಾಗಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಕೊಂಕಣಿ ಸಂಘಟನೆಗಳು ಒಟ್ಟಾಗಿ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಹೆಚ್ಚಿನ ಅಂಕ ಪಡೆದ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ, ಕೊಂಕಣಿ ಭಾಷಿಕ ಶಿಕ್ಷಕರಿಗೆ ಹಾಗೂ ಕಾರವಾರದ ಕೊಂಕಣಿ ಮಾಧ್ಯಮಗಳ ಸಂಪಾದಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ತಾಕುಲ ಗ್ರಾಪಂ ಅಧ್ಯಕ್ಷೆ ಸ್ವಾತಿ ದೇಸಾಯಿ, ಹಣಕೋಣ ಗ್ರಾಪಂ ಉಪಾಧ್ಯಕ್ಷೆ ಶ್ರದ್ಧಾ ನಾಯ್ಕ, ಕೊಂಕಣಿ ಮುಖಂಡರು ಮುಂತಾದವರು ಇದ್ದರು.