ಮುಂಡಗೋಡ: ಧಾರಾಕಾರವಾಗಿ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಮನೆಗಳ ಗೋಡೆಗಳು ಕುಸಿದು ಹಾನಿ ಸಂಭವಿಸಿದೆ.
ಮಳೆಯಿಂದ ಪಟ್ಟಣದಲ್ಲಿ 2, ಹುನಗುಂದ 2, ಚಿಗಳ್ಳಿ 3, ಇಂದೂರ 2,ಚವಡಳ್ಳಿ 2 ಮನೆಗಳು ಸೇರಿ ಒಟ್ಟು ಹನ್ನೊಂದು ಮನೆಗಳ ಗೋಡೆಗಳು ಕುಸಿದು ಬಿದ್ದು ಹಾನಿಯಾಗಿದೆ. ಅಲ್ಲದೇ ಕೆರೆ, ಕಟ್ಟೆಗಳು ಸಹ ಭರ್ತಿಯಾಗಿ ಕೊಡಿ ಹರಿಯುತ್ತಿವೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಚರಂಡಿಗಳಲ್ಲಿ ನೀರು ತುಂಬಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮನೆಯೂಳಗೆ ನುಗ್ಗಿ ಬಂದ ನೀರನ್ನು ಹೊರ ಹಾಕಲು ಮನೆ ಮಾಲಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಮಳೆಯೂ ಕಡಿಮೆಯಾಗಿ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ರೈತರು ಸಹ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಆದರೆ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡಿದೆ.
ಶನಿವಾರ ಸಂಜೆ ಸುರಿದ ಮಳೆಯೂ ದಾಖಲೆಯ ಮಳೆಯಾಗಿದ್ದು 2022 ರಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಮೂಲಕ ದಾಖಲೆ ಮಾಡಿದೆ. ಒಂದೆ ತಾಸಿನಲ್ಲಿ 70.6 ಮಿಮಿ ಮಳೆ ಸುರಿದಿದೆ. ತಾಲೂಕಿನಲ್ಲಿ ಇದುವರೆಗೂ 1181.2 ಮಿಮಿ ಮಳೆಯಾಗಿದೆ.