ತಪ್ಪು ಮಾಡದಿರುವುದು ಧೈರ್ಯದ ಮೂಲ – ರಾಘವೇಶ್ವರ ಶ್ರೀ

ಗೋಕರ್ಣ: ಆಧ್ಯಾತ್ಮಿಕ ಜೀವನ ಹಾಗೂ ಸಾಮಾನ್ಯ ಜೀವನಕ್ಕೆ ಧೈರ್ಯ ಅಥವಾ ಸ್ಥಿರಚಿತ್ತ ಅಗತ್ಯ. ತಪ್ಪು ಮಾಡದಿರುವುದು ಧೈರ್ಯದ ಮೂಲ. ತಪ್ಪು ಮಾಡುವವ ಸಹಜವಾಗಿಯೇ ಭಯಕ್ಕೆ ಶರಣಾಗುತ್ತಾನೆ. ತಪ್ಪು ಮಾಡದಿದ್ದರೆ ನಿಶ್ಚಿಂತೆಯಿಂದ, ಧೈರ್ಯದಿಂದ ಇರುತ್ತಾನೆ. ತಪ್ಪು ಮಾಡದಿರುವುದನ್ನು ರೂಢಿಸಿಕೊಂಡಲ್ಲಿ ಸಹಜವಾಗಿಯೇ ನಿಜವಾದ ಧೈರ್ಯ ನಮಗೆ ಬರುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಧೈರ್ಯ ಕಳೆದುಕೊಂಡು ಆ ಜಾಗದಲ್ಲಿ ಭಯ ಬಂದರೆ ಅದು ನಮ್ಮ ಅವಸಾನಕ್ಕೆ ಕಾರಣವಾಗುತ್ತದೆ. ಇಲ್ಲದ ಬಲವನ್ನು ತಂದುಕೊಡುವಂಥದ್ದು ಧೈರ್ಯ. ಆದರೆ ಇರುವ ಬಲವನ್ನು ಕುಗ್ಗಿಸುವಂಥದ್ದು ಭಯ ಎಂದು ಹೇಳಿದರು.

ಬಂಡಿ ಅನ್ನ ತಿನ್ನುವ ಬಕಾಸುರನ ಬಳಿಗೆ ಹೋಗುವ ಭೀಮ, ಧೈರ್ಯಕ್ಕೆ ಉತ್ತಮ ಉದಾಹರಣೆ. ಬಕಾಸುರ ಕೋಪದಿಂದ ಭೀಮನನ್ನು ಗುದ್ದಿದಾಗಲೂ ತುತ್ತಿನ ಲಯ ತಪ್ಪಲಿಲ್ಲ. ವಿಚಲಿತವಾಗಲು ಸಾಕಷ್ಟು ಕಾರಣಗಳಿದ್ದರೂ ವಿಚಲಿತನಾಗದೇ ಇರುವುದು ಧೈರ್ಯ. ಅಂತೆಯೇ ತಪಸ್ಸಿನಲ್ಲಿ ಮುಳುಗಿದ ಶಿವನ ಸೇವೆಗೆ ಪಾರ್ವತಿ ಒಪ್ಪಿಗೆ ಕೇಳಿದಳು. ಅದಕ್ಕೆ ಶಿವ ಒಪ್ಪಿಕೊಳ್ಳುತ್ತಾನೆ. ವಿಚಲಿತನಾಗುವ ಎಲ್ಲ ಸಾಧ್ಯತೆ ಇದ್ದರೂ ವಿಚಲಿತನಾಗದೇ ಇರುವವನು ಧೀರ ಎಂದು ಕಾಳಿದಾಸ ಬಣ್ಣಿಸಿದ್ದಾನೆ. ಅಂತೆಯೇ ಮನ್ಮಥ ತಪೋನಿರತ ಶಿವನ ಮೇಲೆ ಪುಷ್ಪಬಾಣಗಳನ್ನು ಪ್ರಯೋಗಿಸಿದಾಗಲೂ ಆತ ವಿಚಲಿತನಾಗಲಿಲ್ಲ ಎಂದು ಬಣ್ಣಿಸಿದರು.
ಕೊನೆಗೆ ಶಿವ ಪಾರ್ವತಿಗೆ ಒಲಿದು ಬಂದದ್ದು ತಪಸ್ಸಿನಿಂದ. ಶಿವ ಪಾರ್ವತಿ ಪರಿಣಯ ತಪಸ್ಸಿನಿಂದ ಬಂದದ್ದು. ಚಿತ್ತಚಾಂಚಲ್ಯದಿಂದ ಬಂದದ್ದಲ್ಲ ಎಂದು ವಿಶ್ಲೇಷಿಸಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಶ್ರೀ ಗಳ ಆಶೀರ್ವಾದ ಪಡೆದರು. ಗಾಣಿಗ ಸಮಾಜ, ಸಿದ್ದಿ ಸಮಾಜ ಮತ್ತು ದೇಶಭಂಡಾರಿ ಸಮಾಜಗಳ ವತಿಯಿಂದ ಭಾನುವಾರ ಪಾದಪೂಜೆ ನೆರವೇರಿತು. ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ರಘುನಂದನ್ ಬೇರ್ಕಡವು ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ನಿತೀಶ್ ಅಮ್ಮಣ್ಣಾಯ ಕೊಳಲು, ಅನಿರುದ್ಧ ಭಟ್ ಮೃದಂಗ ಮತ್ತು ಕಾರ್ತಿಕ್ ವೈಧಾತ್ರಿಯವರು ಮೋರ್ಚಿಂಗ್, ಖಂಜಿರ ಮತ್ತು ರಿದಂ ಪ್ಯಾಡ್ ನಲ್ಲಿ ಸಹಕರಿಸಿದರು.